ADVERTISEMENT

ಒಂದೇ ಫ್ರಾಂಚೈಸ್ ಪರ 7 ಸಾವಿರ ರನ್; ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2022, 9:42 IST
Last Updated 20 ಮೇ 2022, 9:42 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಮುಂಬೈ: ಗುಜರಾಜ್‌ ಟೈಟನ್ಸ್‌ ತಂಡದ ವಿರುದ್ಧ ಗುರುವಾರ (ಮೆ.19) ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 54 ಎಸೆತೆಗಳಲ್ಲಿ 73 ರನ್‌ ಸಿಡಿಸಿದ ಅವರು, ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಚುಟುಕು ಕ್ರಿಕೆಟ್‌ನಲ್ಲಿ ಒಂದೇ ಫ್ರಾಂಚೈಸ್ ಪರ 7 ಸಾವಿರಕ್ಕೂ ಹೆಚ್ಚು ರನ್‌ ಗಳಿಸಿದ ವಿಶ್ವದ ಏಕೈಕ ಬ್ಯಾಟರ್‌ ಎಂಬ ಶ್ರೇಯ ವಿರಾಟ್ ಅವರದ್ದಾಯಿತು. ಅವರು, 2008ರಲ್ಲಿ ಐಪಿಎಲ್‌ ಟೂರ್ನಿ ಆರಂಭವಾದಾಗಿನಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. ಈತಂಡಕ್ಕಾಗಿ ಅವರು ಗಳಿಸಿರುವ 7 ಸಾವಿರಕ್ಕೂ ಹೆಚ್ಚು ರನ್‌ ಪೈಕಿ,6,592 ರನ್‌ಗಳು ಐಪಿಎಲ್‌ ಟೂರ್ನಿಗಳಲ್ಲೇ ಬಂದಿವೆ. ಬಾಕಿ ರನ್‌ಗಳನ್ನು ಚಾಂಪಿಯನ್ಸ್‌ ಲೀಗ್ ಟೂರ್ನಿ ವೇಳೆ ಕಲೆ ಹಾಕಿದ್ದಾರೆ.

ಐಪಿಎಲ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ (6,592) ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶಿಖರ್‌ ಧವನ್‌ (6,205), ರೋಹಿತ್‌ ಶರ್ಮಾ (5,877), ಡೇವಿಡ್‌ ವಾರ್ನರ್‌ (5,876), ಸುರೇಶ್‌ ರೈನಾ (5,528) ಮತ್ತು ಎಬಿ ಡಿ ವಿಲಿಯರ್ಸ್‌ (5,162) ಇದ್ದಾರೆ.

ADVERTISEMENT

ಆರ್‌ಸಿಬಿಗೆ ಗೆಲುವು
ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೈಟನ್ಸ್‌, ನಾಯಕ ಹಾರ್ದಿಕ್‌ ಪಾಂಡ್ಯ ಅಜೇಯಅರ್ಧಶತಕದ(62) ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 165 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ ಕೇವಲ 2 ವಿಕೆಟ್‌ ಕಳೆದುಕೊಂಡು, ಇನ್ನೂ 10 ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಿತು.

ನಾಯಕ ಫಫ್ ಡು ಪ್ಲೆಸಿ (44) ಮತ್ತು ವಿರಾಟ್‌ ಮೊದಲ ವಿಕೆಟ್‌ಗೆ 115 ರನ್‌ ಜೊತೆಯಾಟವಾಡಿದರು. ಇವರಿಬ್ಬರೂ ಔಟಾದ ಬಳಿಕ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ ಕೇವಲ 18 ಎಸೆತಗಳಲ್ಲಿ 40 ರನ್‌ ಸಿಡಿಸಿ ಗೆಲುವು ತಂದುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.