ADVERTISEMENT

RR vs RCB| ವಿರಾಟ್ ಬಳಗಕ್ಕೆ ‘ರಾಯಲ್ಸ್‌’ ಚಾಲೆಂಜ್

ಒತ್ತಡದಲ್ಲಿರುವ ರಾಜಸ್ಥಾನ್ ರಾಯಲ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲು

ಪಿಟಿಐ
Published 28 ಸೆಪ್ಟೆಂಬರ್ 2021, 19:32 IST
Last Updated 28 ಸೆಪ್ಟೆಂಬರ್ 2021, 19:32 IST
ಗ್ಲೆನ್ ಮ್ಯಾಕ್ಸ್‌ವೆಲ್ ಹ
ಗ್ಲೆನ್ ಮ್ಯಾಕ್ಸ್‌ವೆಲ್ ಹ   

ದುಬೈ: ಮೂರು ದಿನಗಳ ಹಿಂದೆ ‘ಹಾಲಿ ಚಾಂಪಿಯನ್‌’ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಈಗ ಭರ್ತಿ ಆತ್ಮವಿಶ್ವಾಸದಲ್ಲಿದೆ.

ಬುಧವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡವು ಅಪಾರ ಒತ್ತಡದಲ್ಲಿರುವ ರಾಜಸ್ಥಾನ್ ರಾಯಲ್ಸ್ ಬಳಗವನ್ನು ಎದುರಿಸಲಿದೆ. ಎರಡನೇ ಹಂತದ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ಮೂರನೇ ಪಂದ್ಯದಲ್ಲಿ ಪುಟಿದೆದ್ದಿತು. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಆಕರ್ಷಕ ಅರ್ಧಶತಕಗಳು, ಮಧ್ಯಮವೇಗಿ ಹರ್ಷಲ್ ಪಟೇಲ್ ‘ಹ್ಯಾಟ್ರಿಕ್’ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್‌ ಮೋಡಿಯಿಂದಾಗಿ ಗೆಲುವು ಒಲಿದಿತ್ತು.

10 ಪಂದ್ಯಗಳಲ್ಲಿ ತಂಡವು 12 ಅಂಕಗಳನ್ನು ಗಳಿಸಿದೆ. ರಾಜಸ್ಥಾನ್‌ ತಂಡದೆದುರು ಜಯಿಸಿದರೆ ಪ್ಲೇ ಆಫ್‌ ಪ್ರವೇಶದ್ವಾರಕ್ಕೆ ಮತ್ತಷ್ಟು ನಿಕಟವಾಗಲಿದೆ. ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿರುವ ವಿರಾಟ್ ಲಯಕ್ಕೆ ಮರಳಿರುವುದು ತಂಡದಲ್ಲಿ ಸಮಾಧಾನ ಮೂಡಿಸಿದೆ. ಅಲ್ಲದೇ ಮ್ಯಾಕ್ಸ್‌ವೆಲ್ ಕೂಡ ಕಳೆದ ಪಂದ್ಯದಲ್ಲಿ ಆಡಿದ ರೀತಿ ವಿಶ್ವಾಸ ಹೆಚ್ಚಿಸಿದೆ. ದೇವದತ್ತ ಪಡಿಕ್ಕಲ್ ಮುಂಬೈ ಎದುರಿನ ಪಂದ್ಯದಲ್ಲಿ ವಿಫಲರಾಗಿದ್ದರು. ಆದರೆ ಅದಕ್ಕಿಂತ ಮುಂಚಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ, ತಂಡದ ಬ್ಯಾಟಿಂಗ್‌ನ ‘ಆನೆಬಲ’ವೆಂದೇ ಪರಿಗಣಿಸಲಾಗಿರುವ ಎಬಿ ಡಿವಿಲಿಯರ್ಸ್‌ ಸತತವಾಗಿ ವಿಫಲರಾಗಿದ್ದಾರೆ. ದಕ್ಷಿಣ ಆಫ್ರಿಕಾ ದ ಎಬಿಡಿ ಕಳೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 0,12 ಮತ್ತು 11 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅವರ ಕ್ರಮಾಂಕ ಬದಲಿಸಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ADVERTISEMENT

ಬೌಲಿಂಗ್‌ನಲ್ಲಿ ಕೊಹ್ಲಿಗೆ ಹೆಚ್ಚು ಚಿಂತೆ ಇಲ್ಲ. ಚಾಹಲ್ ಮತ್ತು ಹರ್ಷಲ್ ಅವರ ಜೊತೆಯಾಟ ರಂಗೇರಿದೆ. ಮೊಹಮ್ಮದ್ ಸಿರಾಜ್ ಮತ್ತು ಜೆಮಿಸನ್ ಹೆಚ್ಚು ವಿಕೆಟ್ ಪಡೆದಿಲ್ಲ. ಆದರೆ ಉತ್ತಮ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಎದುರಾಳಿಗಳನ್ನು ಒತ್ತಡದಲ್ಲಿ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಹಲವು ಚಿಂತೆಗಳಿವೆ. ತಾವು ಉತ್ತಮ ಲಯದಲ್ಲಿದ್ದರೂ ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರುತ್ತಿಲ್ಲವೆಂಬ ಸಂಗತಿ ಅವರನ್ನು ಕಾಡುತ್ತಿದೆ. ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಸಂಜು 82 ರನ್‌ಗಳನ್ನು ಗಳಿಸಿದ್ದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತಂಡವು ಸೋತಿಉ. ಕಾರ್ತಿಕ್ ತ್ಯಾಗಿ, ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್ ಮತ್ತು ಯುವ ಬೌಲರ್ ಚೇತನ್ ಸಕಾರಿಯಾ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ.

ಆದರೆ, ಎಂಟು ಪಾಯಿಂಟ್ಸ್‌ನೊಂದಿಗೆ ಆರನೇ ಸ್ಥಾನದಲ್ಲಿರುವ ಸಂಜು ಬಳಗವು ಪ್ಲೇ ಆಫ್‌ ಪ್ರವೇಶಿಸಬೇಕಾದರೆ, ಆರ್‌ಸಿಬಿ ಸೇರಿದಂತೆ ನಾಲ್ಕು ಪಂದ್ಯಗಳಲ್ಲಿ ವಿಜಯ ಸಾಧಿಸಬೇಕು.

ತಂಡಗಳು: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಡ್ಯಾನ್ ಕ್ರಿಸ್ಟಿಯನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಕೈಲ್ ಜೆಮಿಸನ್,ಕೆ.ಎಸ್. ಭರತ್, ಟಿಮ್ ಡೇವಿಡ್, ಮೊಹಮ್ಮದ್ ಅಜರುದ್ದೀನ್, ಪವನ್ ದೇಶಪಾಂಡೆ.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೂಯಿಸ್, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಚೇತನ್ ಸಕಾರಿಯಾ, ರಾಹುಲ್ ತೆವಾಟಿಯಾ, ಆಕಾಶ್ ಸಿಂಗ್, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಮುಸ್ತಫಿಜುರ್ ರೆಹಮಾನ್, ಒಷೇನ್ ಥಾಮಸ್, ರಿಯಾನ್ ಪರಾಗ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.