
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಸಲ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫ್ರ್ಯಾಂಚೈಸಿಯ ತಾರೆಯರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಸೇರಿದಂತೆ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ವಿರಾಟ್, 'ಮತ್ತೆ ಚಾಂಪಿಯನ್ ಆಗಿದ್ದೇವೆ. ಆರ್‌ಸಿಬಿ ಧ್ವಜ ಎತ್ತರದಲ್ಲಿ ರಾರಾಜಿಸುವಂತೆ ಮಾಡಿದೆ. ಇದು ನಿಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಈ ಸಾಧನೆಗಾಗಿ ನಾಯಕಿ ಸ್ಮೃತಿ ಮಂದಾನ ಸೇರಿದಂತೆ ಆರ್‌ಸಿಬಿ ತಂಡದ ಎಲ್ಲರಿಗೂ ಅಭಿನಂದನೆಗಳು. ನಿಸ್ಸಂಶವಾಗಿಯೂ ನೀವಿದಕ್ಕೆ ಅರ್ಹರಾಗಿದ್ದೀರಿ. ಈ ಕ್ಷಣವನ್ನು ಆನಂದಿಸುತ್ತಾ ಅಭಿಮಾನಿಗಳ ಪ್ರೀತಿಯ ಅನುಭೂತಿಯನ್ನು ಸವಿಯಿರಿ ಎಂದು ಹೇಳಿದ್ದಾರೆ.
ಆರ್‌ಸಿಬಿ ಪುರುಷರ ತಂಡವು 18 ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ 2025ರಲ್ಲಿ ಪ್ರಶಸ್ತಿ ಜಯಿಸಿತ್ತು. ಒಟ್ಟಾರೆ ಆರ್‌ಸಿಬಿ ಫ್ರ್ಯಾಂಚೈಸಿಯು ಸತತ ಮೂರು ವರ್ಷಗಳಿಂದ ಪ್ರಶಸ್ತಿ ಜಯಿಸಿದಂತಾಗಿದೆ. 2024ರಲ್ಲೂ ಆರ್‌ಸಿಬಿ ಮಹಿಳೆಯರು ಟ್ರೋಫಿ ಗೆದ್ದಿದ್ದರು.
ಮತ್ತೊಂದೆಡೆ 'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಎಬಿ ಡಿವಿಲಿಯರ್ಸ್ ಸಹ ಆರ್‌ಸಿಬಿ ಗೆಲುವಿನ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
'ಮತ್ತೊಮ್ಮೆ ಆರ್‌ಸಿಬಿ ಮಹಿಳೆಯರ ತಂಡ ಡಬ್ಲ್ಯುಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಉತ್ಕೃಷ್ಟ ಪ್ರದರ್ಶನ ನೀಡುತ್ತಾ ಬಂದ ನಮ್ಮ ಆರ್‌ಸಿಬಿ ತಂಡ, ಇಂದಿನ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ನೋಡಿ ಖುಷಿಯಾಯಿತು. ಸಂಘಟಿತ ಹೋರಾಟದ ಮೂಲಕ ಟ್ರೋಫಿ ಗೆದ್ದ ನಮ್ಮ ಆರ್‌ಸಿಬಿಯ ಹೆಣ್ಣುಮಕ್ಕಳಿಗೆ ಅಭಿನಂದನೆಗಳು. ಪಂದ್ಯದ ಕೊನೆಯವರೆಗೂ ಗೆಲುವಿಗಾಗಿ ಸಾಕಷ್ಟು ಸೆಣೆಸಿದ ಡೆಲ್ಲಿ ತಂಡದ ಆಟ ಕೂಡ ಶ್ಲಾಘನೀಯ. ಈ ಸಲ ಕಪ್ ನಮ್ದು' ಎಂದು ಸಿಎಂ ಹೇಳಿದ್ದಾರೆ.
ಡಿಕೆಶಿ ಅಭಿನಂದನೆಗಳನ್ನು ಸಲ್ಲಿಸಿದ್ದು, 'ತಂಡದ ಆತ್ಮವಿಶ್ವಾಸ, ಶಿಸ್ತು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿತು. ಫೈನಲ್‌ನಲ್ಲಿ ಒತ್ತಡವನ್ನು ನಿಭಾಯಿಸಿತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.