ಜಿತೇಶ್ ಶರ್ಮಾ ಜೊತೆ ದಿನೇಶ್ ಕಾರ್ತಿಕ್ ಸಂಭಾಷಣೆ
ಚಿತ್ರ: @Rcb_Xtra
ನವದೆಹಲಿ: ದೋಹಾದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಮೆಂಟ್‌ನಲ್ಲಿ ಭಾರತ ಎ ತಂಡವನ್ನು ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಮತ್ತು ಐಪಿಎಲ್ ತಾರೆ ಪ್ರಿಯಾಂಶ್ ಆರ್ಯ ಸ್ಥಾನ ಪಡೆದಿದ್ದಾರೆ.
ಈ ಟೂರ್ನಮೆಂಟ್ ನವೆಂಬರ್ 14 ರಿಂದ 23 ರವರೆಗೆ ನಡೆಯಲಿದೆ. ಭಾರತ ಎ ತಂಡ ಒಮಾನ್, ಯುಎಇ ಮತ್ತು ಪಾಕಿಸ್ತಾನ ಎ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎ ಗುಂಪಿನಲ್ಲಿ ಬಾಂಗ್ಲಾದೇಶ ಎ, ಹಾಂಗ್ ಕಾಂಗ್, ಅಫ್ಘಾನಿಸ್ತಾನ ಎ ಮತ್ತು ಶ್ರೀಲಂಕಾ ಎ ತಂಡಗಳನ್ನು ಒಳಗೊಂಡಿದೆ.
ಈ ಟೂರ್ನಮೆಂಟ್‌ನಲ್ಲಿ ಭಾರತ ಎ ತಂಡ ನವೆಂಬರ್ 14 ರಂದು ಯುಎಇ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ನವೆಂಬರ್ 16ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ.
ಜತೇಶ್ ಶರ್ಮಾ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ. 14 ವರ್ಷದ ಸೂರ್ಯವಂಶಿ, ಐಪಿಎಲ್‌ನಲ್ಲಿ ಅಧ್ಭುತ ಪ್ರದರ್ಶನ ತೋರಿರುವ ಪ್ರಿಯಾಂಶ್ ಆರ್ಯ, ಕನ್ನಡಿಗ ವಿಜಯ್ ಕುಮಾರ್ ವೈಶಾಕ್ ಅವರಿಂದ ಕೂಡಿರುವ ತಂಡವನ್ನು ಮುನ್ನಡೆಸಲಿದ್ದಾರೆ. ಜಿತೇಶ್ ಶರ್ಮಾ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ.
‘ಕತಾರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗಾಗಿ ಭಾರತ ಎ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸಿದೆ. ಈ ಪಂದ್ಯಾವಳಿಗಳು 2025ರ ನವೆಂಬರ್ 14 ರಿಂದ 23 ರವರೆಗೆ ದೋಹಾದ ವೆಸ್ಟ್ ಎಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಆಯ್ಕೆಯಾಗಿರುವ ಭಾರತ ಎ ತಂಡ: ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್ (ಉಪನಾಯಕ), ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ (ನಾಯಕ ಮತ್ತು ವಿಕೆಟ್ ಕೀಪರ್), ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಾಕ್, ಯುದ್ವೀರ್ ಸಿಂಗ್ ಚಾರಕ್, ಅಭಿಷೇಕ್ ಪೋರೆಲ್ (ವಿಕೆಟ್ ಕೀಪರ್) ಸುಯಾಂಶ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೀಸಲು ಆಟಗಾರರು: ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ, ಶೇಕ್ ರಶೀದ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.