ರೋಹಿತ್ ಶರ್ಮಾ
(ಪಿಟಿಐ ಚಿತ್ರ)
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024ರ ವರ್ಷದ ಪುರುಷರ ಟ್ವೆಂಟಿ-20 ಕ್ರಿಕೆಟ್ ತಂಡಕ್ಕೆ ಭಾರತದ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ವರ್ಷದ ಪುರುಷರ ಟಿ20 ತಂಡದಲ್ಲಿ ಭಾರತೀಯ ಆಟಗಾರರು ಅಧಿಪತ್ಯ ಸ್ಥಾಪಿಸಿದ್ದಾರೆ. ನಾಯಕ ರೋಹಿತ್ ಸೇರಿದಂತೆ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಸಿಂಗ್ ತಂಡದಲ್ಲಿದ್ದಾರೆ.
ನಾಯಕ ರೋಹಿತ್ ಆರಂಭಿಕನಾಗಿ ಗುರುತಿಸಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಪಾಕಿಸ್ತಾನದ ಬಾಬರ್ ಆಜಂ, ವೆಸ್ಟ್‌ಇಂಡೀಸ್‌ನ ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಫ್ಗಾನಿಸ್ತಾನದ ರಶೀದ್ ಖಾನ್ ಮತ್ತು ಶ್ರೀಲಂಕಾದ ವನಿಂದು ಹಸರಂಗ ತಂಡದಲ್ಲಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಜಯಿಸಿತ್ತು. ಈ ಅವಧಿಯಲ್ಲಿ ರೋಹಿತ್ 11 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ (160.16) 378 ರನ್ ಗಳಿಸಿದ್ದಾರೆ. ಒಂದು ಶತಕವನ್ನು (121) ಬಾರಿಸಿದ್ದಾರೆ.
ಹಾರ್ದಿಕ್ ಪಾಂಡ್ಯ 17 ಪಂದ್ಯಗಳಲ್ಲಿ 352 ರನ್ ಮತ್ತು 16 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ 8 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಗಮನಾರ್ಹ ಪ್ರದರ್ಶನ ನೀಡಿರುವ ಅರ್ಷದೀಪ್ ಸಿಂಗ್ 18 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಐಸಿಸಿ ವರ್ಷದ ಪುರುಷರ ಏಕದಿನ ತಂಡದಲ್ಲಿ ಭಾರತದ ಯಾವುದೇ ಆಟಗಾರರಿಗೆ ಸ್ಥಾನ ಲಭಿಸಿರಲಿಲ್ಲ. ಆದರೆ ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡದಲ್ಲಿ ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ಮತ್ತು ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದರು.
ಐಸಿಸಿ ವರ್ಷದ ಪುರುಷರ ಟಿ20 ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ),
ಟ್ರಾವಿಸ್ ಹೆಡ್,
ಫಿಲ್ ಸಾಲ್ಟ್,
ಬಾಬರ್ ಆಜಂ,
ನಿಕೋಲಸ್ ಪೂರನ್ (ವಿಕೆಟ್ ಕೀಪರ್),
ಸಿಕಂದರ್ ರಾಜಾ,
ಹಾರ್ದಿಕ್ ಪಾಂಡ್ಯ,
ರಶೀದ್ ಖಾನ್,
ವನಿಂದು ಹಸರಂಗ,
ಜಸ್‌ಪ್ರೀತ್ ಬೂಮ್ರಾ,
ಅರ್ಷದೀಪ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.