ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್
ರಾಯಿಟರ್ಸ್ ಚಿತ್ರ
ನವದೆಹಲಿ: ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಮನೋಭಾವವನ್ನು ಮೂಡಿಸುವ ಹೊಣೆಯನ್ನು ಆಗಿನ ನಾಯಕ ರೋಹಿತ್ ಶರ್ಮಾ ಅವರು ತಮಗೆ ವಹಿಸಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹೇಳಿದ್ದಾರೆ.
ಕಳೆದ ವರ್ಷ ಟೀಂ ಇಂಡಿಯಾಗೆ ನೇಮಕಗೊಂಡಿದ್ದ ನಾಯರ್ ಅವರು, 2024–25ರ ಬಾರ್ಡರ್–ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎದುರಾದ 1–3 ಅಂತರದ ಸೋಲಿನ ಬಳಿಕ ಸ್ಥಾನ ತೊರೆದಿದ್ದರು.
ರೋಹಿತ್ ನೀಡಿದ ಜವಾಬ್ದಾರಿ ಕುರಿತು 'ಕ್ರಿಕ್‌ಇನ್ಫೋ' ಜೊತೆ ಮಾತನಾಡಿರುವ ನಾಯರ್, 'ನಾನು ತಂಡದಲ್ಲಿ ಹೊಣೆ ವಹಿಸಿಕೊಂಡಾಗ ರೋಹಿತ್ ಅವರೊಂದಿಗೆ ಮಾತುಕತೆ ನಡೆಸಿದ್ದು ನೆನಪಿದೆ. ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಮನೋಭಾವ ರೂಢಿಸುವುದು, ಆ ಮೂಲಕ ಅತ್ಯುತ್ತಮ ಪ್ರದರ್ಶನ ಹೊರತರುವ ಬಗ್ಗೆ ರೋಹಿತ್ ಉತ್ಸುಕರಾಗಿದ್ದರು' ಎಂದು ಹೇಳಿದ್ದಾರೆ.
ಬಾರ್ಡರ್ – ಗವಾಸ್ಕರ್ ಟೂರ್ನಿಯಲ್ಲಿ ಆಡಿದ 10 ಇನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕ ಸಹಿತ 276 ರನ್ ಗಳಿಸಿದ್ದ ರಾಹುಲ್, ಟೀಂ ಇಂಡಿಯಾ ಪರ ಗರಿಷ್ಠ ರನ್ ಗಳಿಸಿದ ಮೂರನೇ ಬ್ಯಾಟರ್ ಎನಿಸಿದ್ದರು. ಇದೇ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 4 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದ ಅವರು 140 ರನ್ ಗಳಿಸಿದ್ದರು. ಒಮ್ಮೆಯಷ್ಟೇ ಔಟಾಗಿದ್ದರು ಎಂಬುದು ಗಮನಿಸಬೇಕಾದ ಅಂಶ.
'ರಾಹುಲ್ ಅವರು ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್, ಬಾರ್ಡರ್ – ಗವಾಸ್ಕರ್ ಟೂರ್ನಿ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಸೇರಿದಂತೆ ಯಾವುದೇ ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬುದನ್ನು ರೋಹಿತ್ ಬಲವಾಗಿ ನಂಬಿದ್ದರು' ಎಂದು ನಾಯರ್ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿದೆಯಾದರೂ, ಆ ಪಂದ್ಯದಲ್ಲಿ ಕ್ರಮವಾಗಿ 42 ರನ್ ಹಾಗೂ 137 ರನ್ ಗಳಿಸಿರುವ ರಾಹುಲ್, ಟೀಂ ಇಂಡಿಯಾದ ಬ್ಯಾಟಿಂಗ್‌ಗೆ ಭರವಸೆಯಾಗಿದ್ದಾರೆ.
'ಬಾರ್ಡರ್ – ಗವಾಸ್ಕರ್ ಟೂರ್ನಿಯು ರಾಹುಲ್ ಪಾಲಿಗೆ ನಿರ್ಣಾಯಕವಾಗಿತ್ತು. ಏಕೆಂದರೆ, ಈಗಾಗಲೇ ಅವರು ಟಿ20 ತಂಡದಿಂದ ಹೊರಗುಳಿದಿದ್ದರು. ಆಸ್ಟ್ರೇಲಿಯಾದಲ್ಲಿ ರನ್ ಗಳಿಸದಿದ್ದರೆ, ಅದೇ ಅವರ ಕೊನೇ ಸರಣಿಯಾಗಬಹುದಿತ್ತು' ಎಂದು ಎಂದಿರುವ ನಾಯರ್, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆಯೇ ರಾಹುಲ್ ಅವರ ಬ್ಯಾಟಿಂಗ್‌ನಲ್ಲಿನ ಬದಲಾವಣೆ ಆರಂಭವಾಗಿತ್ತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.