ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ರನ್‌ ಹೊಳೆ: ಸಚಿನ್ ತೆಂಡೂಲ್ಕರ್ ಕೊಟ್ಟ ಕಾರಣಗಳೇನು?

ರಾಯಿಟರ್ಸ್
Published 5 ಫೆಬ್ರುವರಿ 2022, 2:38 IST
Last Updated 5 ಫೆಬ್ರುವರಿ 2022, 2:38 IST
ಸಚಿನ್ ತೆಂಡೂಲ್ಕರ್ – ಎಎಫ್‌ಪಿ ಸಂಗ್ರಹ ಚಿತ್ರ
ಸಚಿನ್ ತೆಂಡೂಲ್ಕರ್ – ಎಎಫ್‌ಪಿ ಸಂಗ್ರಹ ಚಿತ್ರ   

ನವದೆಹಲಿ: ಏಕದಿನ ಕ್ರಿಕೆಟ್‌ನಲ್ಲಿ ಇಂದು ರನ್ ಹೊಳೆ ಹರಿಯುವುದಕ್ಕೆ ನಿಯಮಗಳಲ್ಲಿ ಆದ ಬದಲಾವಣೆಯೂ ಕಾರಣ. ಹಾಗೆಂದು ಬ್ಯಾಟರ್‌ಗಳ ಶ್ರೇಯಸ್ಸನ್ನು ಅಲ್ಲಗಳೆಯುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ಪಂದ್ಯದೊಂದಿಗೆ ಭಾರತವು 1,000 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸಚಿನ್ 463 ಏಕದಿನ ಪಂದ್ಯಗಳಲ್ಲಿ ತಂಡದ ಪರ ಆಡಿದ್ದು, 18,426 ರನ್ ಕಲೆಹಾಕಿದ್ದಾರೆ. 49 ಶತಕ ದಾಖಲಿಸಿದ್ದಾರೆ. ದಶಕದ ಹಿಂದೆಯೇ ನಿವೃತ್ತಿಯಾಗಿದ್ದರೂ ರನ್ ಗಳಿಕೆಯಲ್ಲಿ ಸಾಟಿಯಿಲ್ಲದ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.

ADVERTISEMENT

ಬ್ಯಾಟರ್‌ಗಳ ಶ್ರೇಯದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ, ನಿಯಮಗಳು ಮತ್ತು ಪರಿಸ್ಥಿತಿ ಬದಲಾಗಿದೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ಸಚಿನ್ ಹೇಳಿದ್ದಾರೆ.

ಬ್ಯಾಟರ್‌ಗಳ ಸ್ಟ್ರೈಕ್‌ರೇಟ್ 1990ರಲ್ಲಿ ಇದ್ದುದಕ್ಕಿಂತ ಈಗ ಬಹಳ ಮೇಲ್ಮಟ್ಟದಲ್ಲಿದೆ. ಬೌಲರ್‌ಗಳ ಎಕಾನಮಿ ದರವೂ ಹೆಚ್ಚಾಗಿದೆ. 50 ಓವರ್‌ಗಳ ಸರಾಸರಿ ರನ್ ಗಳಿಕೆಯೂ 1990ರಲ್ಲಿ ಇದ್ದುದಕ್ಕಿಂತ ಈಗ ಹೆಚ್ಚಾಗಿದೆ.

‘ಎರಡು ಹೊಸ ಬಾಲ್‌ಗಳು, ಫೀಲ್ಡ್ ನಿರ್ಬಂಧಗಳು ಹಾಗೂ ಪಂದ್ಯಗಳ ಸಮಯದಲ್ಲಿ ಆಗಿರುವ ವ್ಯತ್ಯಾಸಗಳು ಇತ್ತೀಚಿನ ವರ್ಷಗಳಲ್ಲಿ ಪಂದ್ಯವನ್ನು ಬದಲಾಯಿಸಿವೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಎರಡು ಹೊಸ ಬಾಲ್‌ಗಳನ್ನು ಬಳಸುತ್ತಿರುವುದು ರಿವರ್ಸ್ ಸ್ವಿಂಗ್ ಎಸೆತ ಮರೆಯಾಗಲು ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಹೆಚ್ಚಿನ ರಿವರ್ಸ್ ಸ್ವಿಂಗ್ ಅನ್ನು ನಾನು ನೋಡಿಲ್ಲ. ಬಹುಶಃ 46ನೇ ಓವರ್‌ನಿಂದ ರಿವರ್ಸ್ ಸ್ವಿಂಗ್ ಎಸೆಯಬಹುದೇನೋ, ಯಾಕೆಂದರೆ ಅಷ್ಟರಲ್ಲಿ ಆ ಬಾಲ್‌ 23 ಓವರ್ ಹಳೆಯದಾಗಿರುತ್ತದೆ. ಒಂದೇ ಹೊಸ ಬಾಲ್‌ನಲ್ಲಿ ಆಡುವುದರಿಂದ 24 ಓವರ್‌ನಿಂದ ರಿವರ್ಸ್ ಸ್ವಿಂಗ್ ಎಸೆಯಲು ಬೌಲರ್‌ಗೆ ಸಾಧ್ಯವಾಗುತ್ತದೆ. ಮತ್ತೆ 26 ಓವರ್‌ಗಳ ಅವಕಾಶವೂ ದೊರೆಯುತ್ತದೆ’ ಎಂದು ಸಚಿನ್ ಹೇಳಿದ್ದಾರೆ.

ಬಣ್ಣ ಮಾಸಿದ ಚೆಂಡನ್ನು ಎದುರಿಸುವ ತೊಂದರೆಯಿಂದಲೂ ಈಗಿನ ಬ್ಯಾಟರ್‌ಗಳು ಪಾರಾಗಿದ್ದಾರೆ. ಬಣ್ಣ ಮಾಸಿರುವ ಚೆಂಡು ಗಾಳಿಯಲ್ಲಿ ಸ್ವಿಂಗ್ ಆಗುವುದನ್ನು ಗಮನಿಸುವುದು ಕಷ್ಟ. ಅಂಥ ಸಂದರ್ಭದಲ್ಲಿ ಆಫ್‌ ಸ್ಪಿನ್ನರ್‌ಗಳ ದೂಸ್ರಾ ಎಸೆತ ಅಥವಾ ಲೆಗ್ ಸ್ಪಿನ್ನರ್‌ಗಳ ಗೂಗ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.