ಹೋಳಿಯಾಡಿದ ಸಚಿನ್ ತೆಂಡೂಲ್ಕರ್
ಚಿತ್ರ ಕೃಪೆ: ಎಕ್ಸ್
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು ಹೋಳಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಅಂಬಟಿ ರಾಯುಡು, ಯುಸುಫ್ ಫಠಾಣ್ ಸೇರಿ ಹಲವರು ಒಟ್ಟಾಗಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಆಚರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ತಂಡದೊಂದಿಗೆ ಹೋಳಿ ಆಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ, ಹೋಳಿ ಆಟಕ್ಕೆ ಬರದೆ ಮಲಗಿದ್ದ ಯುವರಾಜ್ ಅವರನ್ನು ಎಬ್ಬಿಸಲು ಸಚಿನ್ ಮತ್ತು ಅವರ ತಂಡ ಕೊಠಡಿ ಬಳಿ ತೆರಳಿ ಬಾಗಿಲು ಬಡಿದು ಅವರನ್ನು ಎಬ್ಬಿಸುತ್ತಾರೆ. ನಂತರ ಅವರ ಮೇಲೆ ಬಣ್ಣ, ಬಣ್ಣದ ನೀರನ್ನು ಸುರಿಯುತ್ತಾರೆ. ಬಳಿಕ ಅವರೂ ಆಟದಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ರೀತಿ ಅಂಬಟಿ ರಾಯುಡು ಅವರಿಗೂ ಮಾಡುವ ದೃಶ್ಯವನ್ನು ಕಾಣಬಹುದು.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆಟಗಾರರು ಭಾನುವಾರ ನಡೆಯಲಿರುವ ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಮಾಸ್ಟರ್ ಲೀಗ್‌ನ ಫೈನಲ್‌ನಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಗುರುವಾರ ನಡೆದ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್)ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ 94 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಇಂಡಿಯಾ ಮಾಸ್ಟರ್ಸ್, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
ಯುವರಾಜ್ ಸಿಂಗ್ ಅವರ ಬಿರುಸಿನ ಅರ್ಧಶತಕದ (59) ನೆರವಿನಿಂದ ಇಂಡಿಯಾ ಮಾಸ್ಟರ್ಸ್ ತಂಡವು ಚೊಚ್ಚಲ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಮಾಸ್ಟರ್ಸ್, ಏಳು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆಸೀಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಯುವಿ, ಕೇವಲ 30 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 59 ರನ್ ಗಳಿಸಿ ಅಬ್ಬರಿಸಿದರು.
ಬಳಿಕ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್, ಬ್ಯಾಟಿಂಗ್ ವೈಫಲ್ಯವನ್ನು ಕಂಡಿತ್ತಲ್ಲದೆ 18.1 ಓವರ್‌ಗಳಲ್ಲಿ 126 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.