ಸುಶೀಲಾ ಮೀನಾ ಬೌಲಿಂಗ್ ಮಾಡುತ್ತಿರುವ ಶೈಲಿ ಮತ್ತು ಸಚಿನ್ ತೆಂಡೂಲ್ಕರ್
ನವದೆಹಲಿ: ಟೀಮ್ ಇಂಡಿಯಾದ ಮಾಜಿ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರ ಶೈಲಿಯನ್ನು ಹೋಲುವಂತೆ ಬಾಲಕಿ ಸುಶೀಲಾ ಮೀನಾ ಬೌಲಿಂಗ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಶೀಲಾ ಮೀನಾ ಬೌಲಿಂಗ್ ಮಾಡುತ್ತಿರುವ ವಿಡಿಯೊ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ‘ನಯವಾದ, ಶ್ರಮವಿಲ್ಲದ ಮತ್ತು ವೀಕ್ಷಿಸಲು ಸುಂದರವಾಗಿದೆ. ಸುಶೀಲಾ ಅವರ ಬೌಲಿಂಗ್ ನಿಮ್ಮದೇ (ಜಹೀರ್) ಶೈಲಿಯಿಂದ ಕೂಡಿದೆ. ನೀವು ಈ ವಿಡಿಯೊವನ್ನು ನೋಡುತ್ತೀರಾ? ಎಂದು ಜಹೀರ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸಚಿನ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಈ ವಿಡಿಯೊವನ್ನು 26 ಲಕ್ಷ ಮಂದಿ ವೀಕ್ಷಿಸಿದ್ದು, 62 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಸುಶೀಲಾ ಮೀನಾ ಅವರು ರಾಜಸ್ಥಾನದ ಪ್ರತಾಪ್‌ಗಢದಿಂದ ಮೂಲದವರು ಎಂದು ತಿಳಿದುಬಂದಿದೆ. ಸುಶೀಲಾ ಬೌಲಿಂಗ್ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಗಮನ ಸೆಳೆದಿವೆ.
46 ವರ್ಷದ ಜಹೀರ್ ಖಾನ್ ಅವರು 2015ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 309 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 610 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.