ಮೊಹಮ್ಮದ್ ಸಿರಾಜ್
ಕೃಪೆ: ಪಿಟಿಐ
ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ ತಂಡ, 'ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ' ಸರಣಿಯಲ್ಲಿ 2–2 ಅಂತರದಲ್ಲಿ ಸಮಬಲ ಸಾಧಿಸಿದೆ.
ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಗೆಲುವಿಗೆ 374 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್, 367 ರನ್ ಗಳಿಸಿ ಹೋರಾಟ ಅಂತ್ಯಗೊಳಿಸಿತು.
ನಿನ್ನೆ ವಿಲನ್ ಆಗಿದ್ದ ಸಿರಾಜ್, ಇಂದು ಹೀರೊ ಆಗಿ ಮಿಂಚಿದರು. ಎರಡನೇ ಇನಿಂಗ್ಸ್‌ನಲ್ಲಿ 104 ರನ್ ನೀಡಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ವಿಲನ್ ಆಗಿದ್ದ ಸಿರಾಜ್
ಕಠಿಣ ಗುರಿ ಬೆನ್ನತ್ತಿದ್ದ ಆತಿಥೇಯ ತಂಡ 106 ರನ್‌ಗೆ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ 'ಟೆಸ್ಟ್ ಪರಿಣತ' ಬ್ಯಾಟರ್‌ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಜೊತೆಯಾಗಿದ್ದರು.
ಬ್ರೂಕ್ ಅವರು ಇನಿಂಗ್ಸ್‌ನ 35ನೇ ಓವರ್‌ನ ಮೊದಲ ಎಸೆತವನ್ನು ಪುಲ್ ಮಾಡಿದ್ದರು. ಗಾಳಿಯಲ್ಲಿ ಹಾರಿದ ಚೆಂಡನ್ನು ಬೌಂಡರಿ ಗೆರೆ ಬಳಿ ಹಿಡಿದ ಮೊಹಮ್ಮದ್ ಸಿರಾಜ್, ಅರಿವಿಲ್ಲದೆ ಬೌಂಡರಿ ಗೆರೆ ತುಳಿದರು. ಅಷ್ಟರಲ್ಲಿ, ಸಂಭ್ರಮ ಆರಂಭಿಸಿದ್ದ ಟೀಂ ಇಂಡಿಯಾ ನಿರಾಸೆ ಅನುಭವಿಸಿತು.
ಇದಾದ ನಂತರ ಬ್ರೂಕ್ ಅಬ್ಬರಿಸಿದರು. ಟಿ20 ಶೈಲಿಯಲ್ಲಿ ಆಡಿದ ಅವರು 98 ಎಸೆತಗಳಲ್ಲೇ 111 ರನ್ ಗಳಿಸಿದರು. ಅವರೊಂದಿಗೆ 4ನೇ ವಿಕೆಟ್‌ಗೆ 195 ರನ್ ಕೂಡಿಸಿದ ಜೋ ರೂಟ್ (105 ರನ್) ಕೂಡ ಶತಕ ಸಿಡಿಸಿದರು. ಒಂದುವೇಳೆ ಸಿರಾಜ್ ಆ ಎಡವಟ್ಟು ಮಾಡದೇ ಇದಿದ್ದರೆ ಇಂಗ್ಲೆಂಡ್ ತಂಡದ ಜೊತೆಯಾಟ ಬೆಳೆಯುತ್ತಿರಲಿಲ್ಲ. ಆಂಗ್ಲರನ್ನು ಬೇಗನೆ ಕಟ್ಟಿಹಾಕಬಹುದಿತ್ತು. ಹೀಗಾಗಿ, ಅಭಿಮಾನಿಗಳ ಪಾಲಿಗೆ ಸಿರಾಜ್ ವಿಲನ್ ಆದರು.
ಛಲ ಬಿಡದ ಭಾರತ
ರೂಟ್–ಬ್ರೂಕ್ ಕಾಡಿದರೂ ಛಲ ಬಿಡದೆ ಆಡಿದ ಟೀಂ ಇಂಡಿಯಾ ಬೌಲರ್‌ಗಳು, ನಾಲ್ಕನೇ ದಿನದ ಕೊನೇ ಹಂತದಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಕೈಜಾರದಂತೆ ನೋಡಿಕೊಂಡರು. ರೂಟ್, ಬ್ರೂಕ್ ಹಾಗೂ ಜೇಕೊಬ್ ಬೆಥೆಲ್ ವಿಕೆಟ್ ಪತನದಿಂದ ಆತಿಥೇಯರ ಮೇಲೆ ಒತ್ತಡ ಹೆಚ್ಚಿತು. ಹೀಗಾಗಿ, ಕೊನೇ ದಿನ ಪಂದ್ಯ ಜಯಿಸಲು ಆತಿಥೇಯರಿಗೆ 35 ರನ್ ಹಾಗೂ ಭಾರತಕ್ಕೆ 4 ವಿಕೆಟ್‌ಗಳ ಅವಶ್ಯಕತೆ ಇತ್ತು.
ಹೀರೊ ಆದ ಸಿರಾಜ್
ಭರವಸೆಯ ಬ್ಯಾಟರ್ ಜೆಮೀ ಸ್ಮಿತ್ ಅವರನ್ನು 5ನೇ ದಿನದಾಟದ ಆರಂಭದಲ್ಲೇ ಪೆವಿಲಿಯ್‌ಗೆ ಅಟ್ಟಿದ ಸಿರಾಜ್, ಆತಿಥೇಯರ ಮೇಲೆ ಮತ್ತಷ್ಟು ಒತ್ತಡ ಹೇರಿದರು. ಸ್ಮಿತ್ ಅವರ ಹಿಂದೆಯೇ ಜೆಮೀ ಓವರ್ಟನ್ ಅವರನ್ನೂ ಎಲ್‌ಬಿ ಬಲೆಗೆ ಬೀಳಿಸಿದರು. ಅವರಿಗೆ ಸಾಥ್ ನೀಡಿದ ಪ್ರಸಿದ್ಧ ಕೃಷ್ಣ, ಜೋಶ್ ಟಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಹೀಗಾಗಿ, ಗಾಯಾಳು ಕ್ರಿಸ್ ವೋಕ್ಸ್ ಕ್ರೀಸ್‌ಗಿಳಿಯಬೇಕಾಯಿತು. ಕೊನೇ ವಿಕೆಟ್‌ಗೆ ಆಂಗ್ಲರು 17 ರನ್ ಗಳಿಸಬೇಕಿತ್ತು. ವೋಕ್ಸ್ ಒಂದು ತುದಿಯಲ್ಲಿ 'ಒಂಟಿ' ಕೈಯಲ್ಲಿ ಬ್ಯಾಟ್ ಹಿಡಿದು ನಿಂತರೂ ಬೇಕಿದ್ದ ಎಲ್ಲ ರನ್‌ಗಳನ್ನು ಗಳಿಸಲು ಗಸ್ ಅಟ್ಕಿನ್‌ಸನ್ ಅವರಿಗೆ ಸಾಧ್ಯವಾಗಲಿಲ್ಲ. ಅವರನ್ನು ಬೌಲ್ಡ್ ಮಾಡಿದ ಸಿರಾಜ್, ಟೀಂ ಇಂಡಿಯಾ ಗೆಲುವಿನಲ್ಲಿ ಹೀರೊ ಆದರು. ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಶೈಲಿಯಲ್ಲಿ ಸಂಭ್ರಮಿಸಿದರು.
30.1 ಓವರ್ ಬೌಲಿಂಗ್ ಮಾಡಿದ ಸಿರಾಜ್, 104 ರನ್ ಬಿಟ್ಟುಕೊಟ್ಟು 5 ವಿಕೆಟ್ ಜೇಬಿಗಿಳಿಸಿದರು. ಇದು, ಈ ಟೂರ್ನಿಯಲ್ಲಿ ಅವರಿಗೆ ಎರಡನೇ ಐದು ವಿಕೆಟ್ ಗೊಂಚಲು. ಮೊದಲ ಇನಿಂಗ್ಸ್‌ನಲ್ಲೂ ನಾಲ್ಕು ವಿಕೆಟ್ ಪಡೆದಿದ್ದ ಕಾರಣ, ಅರ್ಹವಾಗಿಯೇ ಅವರು ಈ ಪಂದ್ಯದ 'ಶ್ರೇಷ್ಠ' ಆಟಗಾರ ಎನಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.