ADVERTISEMENT

ನಾನು ಖಂಡಿತವಾಗಿ ರಾಜಕೀಯಕ್ಕೆ ಬರಲ್ಲ: ಟೀಮ್ ಇಂಡಿಯಾ ಕೋಚ್‌ ಆಗಲು ಸಿದ್ಧ; ಗಂಗೂಲಿ

ಪಿಟಿಐ
Published 22 ಜೂನ್ 2025, 12:51 IST
Last Updated 22 ಜೂನ್ 2025, 12:51 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ   

ಕೋಲ್ಕತ್ತ: ‘ನಾನು ಖಂಡಿತವಾಗಿಯೂ ರಾಜಕೀಯ ಪ್ರವೇಶಿಸುವುದಿಲ್ಲ. ಆದರೆ, ಟೀಮ್ ಇಂಡಿಯಾ ಕೋಚ್‌ ಆಗುವುದಕ್ಕೆ ಅವಕಾಶ ಸಿಕ್ಕರೆ ಯಾವುದೇ ಅಭ್ಯಂತರವಿಲ್ಲದೆ ಒಪ್ಪಿಕೊಳ್ಳುತ್ತೇನೆ’ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಟೀಮ್ ಇಂಡಿಯಾಕ್ಕೆ ತರಬೇತಿ ನೀಡಲು ಬಯಸುತ್ತೀರಾ ಎಂದು ‘ಪಿಟಿಐ’ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ವಿಭಿನ್ನ ಹುದ್ದೆಗಳನ್ನು ನಿರ್ವಹಿಸಿರುವುದರಿಂದ ಅದರ ಬಗ್ಗೆ ಎಂದಿಗೂ ಯೋಚಿಸಲಿಲ್ಲ’ ಎಂದಿದ್ದಾರೆ.

53 ವರ್ಷದ ಗಂಗೂಲಿ ಅವರು 2018-19 ಮತ್ತು 2022-24ರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿದ್ದರು.

ADVERTISEMENT

2013ರಲ್ಲಿ ನಾನು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದೆ. ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷನಾಗಿದ್ದೆ. ಆದರೆ, ನಾನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಟೀಮ್ ಇಂಡಿಯಾ ಕೋಚ್ ಆಗುವ ಮೂಲಕ ಹೆಚ್ಚಿನ ಕೊಡುಗೆ ನೀಡಬಹುದಿತ್ತಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಭವಿಷ್ಯದಲ್ಲಿ ಏನಾಗುತ್ತದೆ ಎಂದು ನಾವು ಎದುರು ನೋಡುತ್ತೇವೆ. ನನಗೆ ಕೇವಲ 53 ವರ್ಷ ವಯಸ್ಸಾಗಿದೆ. ಆದ್ದರಿಂದ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ಅವಕಾಶ ಸಿಕ್ಕರೆ ಕೋಚ್ ಆಗುವುದಕ್ಕೆ ಮುಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.

2026ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷ ಸೇರಲು ಬಯಸುತ್ತೀರಾ? ಮುಖ್ಯಮಂತ್ರಿ ಹುದ್ದೆಯ ಭರವಸೆ ನೀಡಿದರೆ ಏನು? ಎಂದು ಕೇಳಿದ್ದಕ್ಕೆ ನಗುತ್ತಾ ಉತ್ತರಿಸಿದ ಗಂಗೂಲಿ, ‘ಖಂಡಿತವಾಗಿಯೂ ನನಗೆ ಆಸಕ್ತಿ ಇಲ್ಲ’ ಎಂದು ತಿಳಿಸಿದ್ದಾರೆ.

ಸದ್ಯ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾ ಕೋಚ್‌ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಗೆಲುವಿನ ನಂತರ ತಮ್ಮ ವೇಗವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಗಂಗೂಲಿ ಪ್ರಶಂಸಿಸಿದ್ದಾರೆ.

ಗಂಭೀರ್ ಎಷ್ಟು ಚತುರರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗಂಭೀರ್ ಅವರ ಉತ್ಸಾಹಭರಿತ ಮತ್ತು ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವ ಶೈಲಿ ನನಗೆ ಇಷ್ಟವಾಗುತ್ತದೆ. ನಾನು ಅವರೊಂದಿಗೆ ಆಡಿದ್ದೇನೆ. ಅವರು ನನ್ನ ಮತ್ತು ಹಿರಿಯ ಆಟಗಾರರ ಬಗ್ಗೆ ಅಪಾರ ಗೌರವ ಹೊಂದಿರುವ ಉತ್ತಮ ವ್ಯಕ್ತಿ. ಈಗಲೂ ಸಹ ಅವರು ತಮ್ಮ ಕೆಲಸದ ಬಗ್ಗೆ ಅತ್ಯಂತ ಉತ್ಸಾಹಭರಿತರಾಗಿರುತ್ತಾರೆ. ನಾನು ಗಂಭೀರ್‌ಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.