ADVERTISEMENT

Asia Cup 2022: ಸೂಪರ್ ಸಂಡೇ; ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 5:11 IST
Last Updated 27 ಆಗಸ್ಟ್ 2022, 5:11 IST
ಪ್ರಜಾವಾಣಿ ವೆಬ್ ಡೆಸ್ಕ್
ಪ್ರಜಾವಾಣಿ ವೆಬ್ ಡೆಸ್ಕ್   

ದುಬೈ: ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವು ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಹಾಂಗ್‌ಕಾಂಗ್ ತಂಡಗಳು ಕಾಣಿಸಿಕೊಂಡಿವೆ. 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ತಂಡಗಳಿವೆ. ಇಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು 'ಸೂಪರ್ 4' ಹಂತಕ್ಕೆ ತೇರ್ಗಡೆ ಹೊಂದಲಿವೆ.

ಸೂಪರ್ 4 ಹಂತದ ಅಗ್ರ ಎರಡು ತಂಡಗಳು ಸೆಪ್ಟೆಂಬರ್ 11ರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಹಾಗಾಗಿ ಸೂಪರ್ 4 ಹಂತದಲ್ಲೂ ಮಗದೊಮ್ಮೆ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಇತ್ತಂಡಗಳು ಫೈನಲ್‌ಗೆ ಲಗ್ಗೆ ಹಾಕಿದರೆ ಮೂರನೇ ಬಾರಿ ಮುಖಾಮುಖಿಯಾಗಲಿವೆ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಾಹಲ್ ಲಯ ಕಂಡುಕೊಳ್ಳಬೇಕಾಗಿರುವುದು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವೆನಿಸಲಿದೆ.

1984ರಲ್ಲಿ ಆರಂಭವಾದ ಏಷ್ಯಾ ಕಪ್‌ನಲ್ಲಿ ಭಾರತ ಇದುವರೆಗೆ ಒಟ್ಟು ಏಳು ಬಾರಿ ಪ್ರಶಸ್ತಿ ಜಯಿಸಿವೆ. 2016ರಲ್ಲಿ ಟ್ವೆಂಟಿ-20 ಮಾದರಿಯಲ್ಲಿ ಏಷ್ಯಾ ಕಪ್ ಆಯೋಜಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಟಿ20 ಮಾದರಿಯಲ್ಲೇ ಏಷ್ಯಾ ಕಪ್ ನಡೆಯುತ್ತಿದೆ.

ಏಷ್ಯಾ ಕಪ್ ಚಾಂಪಿಯನ್:
1984: ಭಾರತ
1986: ಶ್ರೀಲಂಕಾ
1988: ಭಾರತ
1990/91: ಭಾರತ
1995: ಭಾರಹತ
1997: ಶ್ರೀಲಂಕಾ
2000: ಪಾಕಿಸ್ತಾನ
2004: ಶ್ರೀಲಂಕಾ
2008: ಶ್ರೀಲಂಕಾ
2010: ಭಾರತ
2012: ಪಾಕಿಸ್ತಾನ
2014: ಶ್ರೀಲಂಕಾ
2016: ಭಾರತ
2018: ಭಾರತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.