ADVERTISEMENT

ಚಾಂಪಿಯನ್ಸ್ ಟ್ರೋಫಿ | ಭಾರತ ತಂಡಕ್ಕೆ ಸೂರ್ಯ ಬಲ ಇರಬೇಕಿತ್ತು: ಸುರೇಶ್ ರೈನಾ

ಪಿಟಿಐ
Published 19 ಜನವರಿ 2025, 13:11 IST
Last Updated 19 ಜನವರಿ 2025, 13:11 IST
ಸೂರ್ಯಕುಮಾರ್ ಯಾದವ್ 
ಸೂರ್ಯಕುಮಾರ್ ಯಾದವ್    

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಸ್ಥಾನ ನೀಡಬೇಕಿತ್ತು ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ. 

ಶನಿವಾರ ಬಿಸಿಸಿಐ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಬ್ಯಾಟರ್ ಸೂರ್ಯಕುಮಾರ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಸ್ಥಾನ ನೀಡಿಲ್ಲ. 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಇವರಿಬ್ಬರೂ ಇದ್ದರು. 

ಕನ್ನಡಿಗ ಪ್ರಸಿದ್ಧ ಕೃಷ್ಣ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ವಿಕೆಟ್‌ ಕೀಪರ್ ಇಶಾನ್ ಕಿಶನ್ ಅವರಿಗೂ ತಂಡದಲ್ಲಿ ಸ್ಥಾನ ಲಭಿಸಿಲ್ಲ. 

ADVERTISEMENT

‘ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ತಂಡದಲ್ಲಿ ಸೂರ್ಯ ಇದ್ದರು. ಅವರು ತಮ್ಮ 360 ಡಿಗ್ರಿ ಶೈಲಿಯ ಬ್ಯಾಟಿಂಗ್‌ಗೆ ಚಿರಪರಿಚಿತರು. ಪ್ರತಿ ಓವರ್‌ಗೆ 9 ರನ್‌ ಗಳಿಸಬಲ್ಲ ಸಮರ್ಥ ಆಟಗಾರ. ತಮ್ಮ ವಿಭಿನ್ನ ಶೈಲಿ ಮತ್ತು ಬಿರುಸಿನ ಆಟದ ಮೂಲಕ ಎದುರಾಳಿಗಳ ಒತ್ತಡ ಹೆಚ್ಚಿಸುವ ಸಾಮರ್ಥ್ಯ ಅವರಿಗೆ ಇದೆ’ ಎಂದು ರೈನಾ ಅವರು ಸ್ಟಾರ್‌ ಸ್ಪೋರ್ಟ್ಸ್ ಪ್ರೆಸ್‌ ರೂಮ್‌ನಲ್ಲಿ ಹೇಳಿದ್ದಾರೆ. 

‘ಸೂರ್ಯ ತಂಡದಲ್ಲಿ ಇದ್ದಿದ್ದರೆ, ಮಧ್ಯಮ ಕ್ರಮಾಂಕದ ಶಕ್ತಿಯಾಗುತ್ತಿದ್ದರು. ಅವರಿಲ್ಲದೇ ಈಗ ಅಗ್ರ 3 ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಲಿದೆ. ಆ ಮೂವರು ಸದ್ಯ ಉತ್ತಮ ಫಾರ್ಮ್‌ನಲ್ಲಿ ಇಲ್ಲ. ಸೂರ್ಯ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡುವಂತಹ ಸಮರ್ಥ ಆಟಗಾರ’ ಎಂದರು. 

ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಫಿಟ್‌ನೆಸ್ ಇಲ್ಲದ ಕಾರಣದಿಂದ ಆಡುವುದು ಅನುಮಾನ. ಮೊಹಮ್ಮದ್ ಶಮಿ ಅವರು ಗಾಯದ ಕಾರಣದಿಂದ ದೀರ್ಘ ಕಾಲದಿಂದ ಆರೈಕೆಯಲ್ಲಿದ್ದರು. ಇದೀಗ ಸಿರಾಜ್ ಕೂಡ ಇಲ್ಲದಿರುವುದರ ಬಗ್ಗೆ ರೈನಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಸಿರಾಜ್ ಭಿನ್ನ ರೀತಿಯ ಫಾರ್ಮ್‌ನಲ್ಲಿದ್ದರು.  ಆದರೆ ಫೆಬ್ರುವರಿ 12ರವರೆಗೆ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವಿದ್ದು, ಸಿರಾಜ್ ಮರಳಿ ಸ್ಥಾನ ಪಡೆಯುವ ವಿಶ್ವಾಸವಿದೆ. ಹರ್ಷಿತ್ ರಾಣಾ ಉತ್ತಮ ಬೌಲರ್ ಎಂಬುದರಲ್ಲಿ ಅನುಮಾನವಿಲ್ಲ. ಹರ್ಷಿತ್ ಮತ್ತು ಅರ್ಷದೀಪ್ ಸಿಂಗ್ ಅವರು ಅಂತಿಮ ಹಂತದ ಓವರ್‌ಗಳಲ್ಲಿ ಬ್ಯಾಟರ್‌ಗಳನ್ನು ನಿಯಂತ್ರಿಸಬಲ್ಲರು. ಆದರೆ ಬೂಮ್ರಾ ಇಲ್ಲದ ಸಂದರ್ಭದಲ್ಲಿ ಸಿರಾಜ್ ಉತ್ತಮ ಆಯ್ಕೆಯಾಗುವರು’ ಎಂದು ರೈನಾ ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.