ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ| ಕಳಪೆ ಬ್ಯಾಟಿಂಗ್‌ಗೆ ದಂಡ ತೆತ್ತ ಕರ್ನಾಟಕ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವಿಂಟಿ–20 ಕ್ರಿಕೆಟ್ ಟೂರ್ನಿ: ಸೆಮಿಫೈನಲ್‌ಗೆ ಪಂಜಾಬ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 20:00 IST
Last Updated 26 ಜನವರಿ 2021, 20:00 IST
ಕರುಣ್ ನಾಯರ್
ಕರುಣ್ ನಾಯರ್   

ಅಹಮದಾಬಾದ್: ಸತತ ಮೂರನೇ ಸಲ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಜಯಿಸುವ ಕರ್ನಾಟಕ ತಂಡದ ಕನಸು ಭಗ್ನಗೊಂಡಿತು.

ಮಂಗಳವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಬಳಗವು ಕಳಪೆ ಬ್ಯಾಟಿಂ ಗ್‌ಗೆ ದಂಡ ತೆತ್ತಿತು. ಸರ್ದಾರ್‌ ವಲ್ಲಭ ಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ಪಂಜಾಬ್ ಎದುರು 9 ವಿಕೆಟ್‌ಗಳಿಂದ ಸೋತಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡವು ಕರ್ನಾಟಕ ಬಳಗವನ್ನು ಕೇವಲ 87 ರನ್‌ಗಳಿಗೆ ನಿಯಂತ್ರಿಸಿತು. ಮಧ್ಯಮವೇಗಿ ಸಿದ್ಧಾರ್ಥ್ ಕೌಲ್ (15ಕ್ಕೆ3) ಕರ್ನಾಟಕಕ್ಕೆ ಪೆಟ್ಟುಕೊಟ್ಟರು. ಅವರಿಗೆ ತಕ್ಕ ಜೊತೆ ನೀಡಿದ ಸಂದೀಪ್ ಶರ್ಮಾ, ಆರ್ಷದೀಪ್ ಸಿಂಗ್ ಮತ್ತು ರಮಣದೀಪ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು. ಗುರಿ ಬೆನ್ನತ್ತಿದ ಪಂಜಾಬ್ ತಂಡವು ಸುಲಭವಾಗಿ ಜಯಿಸಿತು. ಪ್ರಭಸಿಮ್ರನ್ ಸಿಂಗ್ (ಔಟಾಗದೆ 49) ಮತ್ತು ಮನದೀಪ್ ಸಿಂಗ್ (ಔಟಾಗದೆ 35) ಅವರ ಬ್ಯಾಟಿಂಗ್‌ನಿಂದ 12. 4 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್ ಗಳಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿತು.

ADVERTISEMENT

ಬೆಂಗಳೂರು ಸಮೀಪದ ಆಲೂರು ಕ್ರೀಡಾಂಗಣದಲ್ಲಿ ನಡೆದಿದ್ದ ಎಲೀಟ್ ಎ ಗುಂಪಿನ ಪಂದ್ಯದಲ್ಲಿಯೂ ಕರ್ನಾಟಕವು ಪಂಜಾಬ್ ಎದುರು ಸೋತಿತ್ತು. ಉಳಿದ ಪಂದ್ಯಗಳಲ್ಲಿ ಜಯಿಸಿ, ರನ್‌ರೇಟ್ ಆಧಾರದಲ್ಲಿ ಎಂಟರ ಘಟ್ಟ ಪ್ರವೇಶಿಸಿತ್ತು.

ಕರ್ನಾಟಕದ ಇನಿಂಗ್ಸ್‌ ಆರಂಭಿಸಿದ ದೇವದತ್ತ ಪಡಿಕ್ಕಲ್ (11 ರನ್) ಮತ್ತು ನಾಯಕ ಕರುಣ್ ನಾಯರ್‌ (12 ರನ್) ಮೊದಲ ವಿಕೆಟ್‌ ಜೊತೆಯಾಟದಲ್ಲಿ 24 ರನ್‌ ಸೇರಿಸಿದರು. 3ನೇ ಓವರ್‌ನಲ್ಲಿ ನಾಯರ್ ವಿಕೆಟ್ ಕಬಳಿಸಿದ ಸಂದೀಪ್ ಶರ್ಮಾ ಮೊದಲ ಪೆಟ್ಟು ಕೊಟ್ಟರು. ಅದರ ನಂತರ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು.

ಗದುಗಿನ ಹುಡುಗ ಅನಿರುದ್ಧ ಜೋಶಿ (27; 34ಎ) ಮತ್ತು ಶ್ರೇಯಸ್ ಗೋಪಾಲ್ (13 ರನ್) ಬಿಟ್ಟರೆ ಉಳಿದವರು ಎರಡಂಕಿ ಮುಟ್ಟಲಿಲ್ಲ. 63 ರನ್‌ಗಳ ಅಂತರದಲ್ಲಿ ಒಂಬತ್ತು ವಿಕೆಟ್‌ಗಳು ಪತನವಾದವು.

ನಾಯಕ ಕರುಣ್ ಮತ್ತು ಉಪ ನಾಯಕ ಪವನ್ ದೇಶಪಾಂಡೆ ಅವರು ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಪಂದ್ಯದಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಬಿ.ಆರ್. ಶರತ್ ಅವರಿಗೆ ಅವಕಾಶ ನೀಡಿ ಶ್ರೀಜಿತ್‌ಗೆ ವಿಶ್ರಾಂತಿ
ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.