ADVERTISEMENT

T20 WC: ಬಾಬರ್, ಮಲಿಕ್ ಅಬ್ಬರ; ಪಾಕ್‌ಗೆ ಸತತ 5ನೇ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2021, 17:49 IST
Last Updated 7 ನವೆಂಬರ್ 2021, 17:49 IST
ಬಾಬರ್ ಆಜಂ
ಬಾಬರ್ ಆಜಂ   

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ 72 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಸತತ ಐದನೇ ಗೆಲುವು ದಾಖಲಿಸಿರುವ ಪಾಕಿಸ್ತಾನ, ಎರಡನೇ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಸೂಪರ್-12 ಹಂತದಲ್ಲಿ ಎಲ್ಲ ಐದು ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ಮುಗ್ಗರಿಸಿದೆ.

ಮಗದೊಂದು ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್, ಗ್ರೂಪ್ 2ರಲ್ಲಿ ಎರಡನೇ ತಂಡವಾಗಿ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿದೆ. ಅತ್ತ ಅಫ್ಗನ್ ಜೊತೆಗೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.

ADVERTISEMENT

ಈಗ ಬುಧವಾರ ನೆಡಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಮತ್ತು ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವು ಆಸ್ಟ್ರೇಲಿಯಾ ತಂಡದ ಸವಾಲನ್ನು ಎದುರಿಸಲಿದೆ.

ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ನಾಯಕ ಬಾಬರ್ ಆಜಂ (66) ಹಾಗೂ ಶೋಯಬ್ ಮಲಿಕ್ (54*) ಬಿರುಸಿನ ಅರ್ಧಶತಕಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ಯಾವ ಹಂತದಲ್ಲೂ ಸವಾಲನ್ನು ಒಡ್ಡಲಿಲ್ಲ. ಅಲ್ಲದೆ ಆರು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಲಷ್ಟೇ ಸಾಧ್ಯವಾಯಿತು. ರಿಚರ್ಡ್ ಬ್ಯಾರಿಂಗ್ಟನ್ 54 ರನ್ ಗಳಿಸಿ ಔಟಾಗದೆ ಉಳಿದರು.

ಈ ಮೂದಲು ಮೊಹಮ್ಮದ್ ರಿಜ್ವಾನ್ (15) ಹಾಗೂ ಫಖರ್ ಜಮಾನ್‌ಗೆ (8) ಮಿಂಚಲು ಸಾಧ್ಯವಾಗಲಿಲ್ಲ. ಬಳಿಕಬಾಬರ್ ಹಾಗೂ ಮೊಹಮ್ಮದ್ ಹಫೀಜ್ (31) ತೃತೀಯ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ಕಟ್ಟಿದರು.

47 ಎಸೆತಗಳನ್ನು ಎದುರಿಸಿದ ಬಾಬರ್, ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು.

ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಮಲಿಕ್, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 54 ರನ್ ಗಳಿಸಿ ಔಟಾಗದೆ ಉಳಿದ ಮಲಿಕ್ ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದ್ದವು.

ಕೊನೆಯ 30 ಎಸೆತಗಳಲ್ಲಿ ಪಾಕಿಸ್ತಾನ 77 ರನ್ ಸೊರೆಗೈದಿತ್ತು. ಈ ಪೈಕಿ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 26 ರನ್ ಸೇರಿದಂತೆ ಅಂತಿಮ 12 ಎಸೆತಗಳಲ್ಲಿ 43 ರನ್ ಹರಿದು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.