ADVERTISEMENT

T20 World Cup | IND vs PAK: ಪಾರಮ್ಯ ಸಾಧಿಸುವತ್ತ ಸೂರ್ಯ ಪಡೆ ಚಿತ್ತ

ಟಿ20 ವಿಶ್ವಕಪ್ ಕ್ರಿಕೆಟ್: ಭಾರತ–ಪಾಕಿಸ್ತಾನ ಮುಖಾಮುಖಿ ಇಂದು

ಪಿಟಿಐ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
<div class="paragraphs"><p>ಭಾರತ ತಂಡದ ಇಶಾನ್ ಕಿಶನ್, ಅಕ್ಷರ್ ಪಟೇಲ್,, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಮೊಹಮ್ಮದ್ ಸಿರಾಜ್ ಅವರು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸಿದರು&nbsp;</p></div>

ಭಾರತ ತಂಡದ ಇಶಾನ್ ಕಿಶನ್, ಅಕ್ಷರ್ ಪಟೇಲ್,, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಮೊಹಮ್ಮದ್ ಸಿರಾಜ್ ಅವರು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸಿದರು 

   

–ಪಿಟಿಐ ಚಿತ್ರ

ಕೊಲಂಬೊ: ಮಹಾಶಿವರಾತ್ರಿಯ ದಿನವಾದ ಭಾನುವಾರ ಕ್ರಿಕೆಟ್ ಪ್ರಿಯರಿಗೆ ರೋಚಕತೆಯ ರಸದೌತಣ ಖಾತ್ರಿಯಾಗಿದೆ. ಏಕೆಂದರೆ ‘ಬದ್ಧ ಪ್ರತಿಸ್ಪರ್ಧಿ’ಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿ ಮುಖಾಮುಖಿಯಾಗಲಿವೆ. 

ADVERTISEMENT

ಬಹುಶಃ ಇತಿಹಾಸದಲ್ಲಿ ಹಿಂದೆಂದೂ ಇಂತಹ ತೀವ್ರವಾದ ನಾಟಕಕ್ಕೆ ಕ್ರಿಕೆಟ್‌ ಆಟವು ಸಾಕ್ಷಿಯಾಗಿರಲಿಲ್ಲ. ಭಾರತ ಮತ್ತು ಪಾಕಿಸ್ತಾನಗಳ ನಡುವಣ ಘನಘೋರ ಯುದ್ಧಗಳು ನಡೆದಾಗಲೂ ಕ್ರಿಕೆಟ್ ಸಂಬಂಧವು ಈ ಮಟ್ಟಕ್ಕೆ ಹಾಳಾಗಿರಲಿಲ್ಲ. ಅತ್ಯಂತ ವಿಷಮ ಪರಿಸ್ಥಿತಿಗಳಲ್ಲಿ ಮೈದಾನದಲ್ಲಿ ಸಾಂದರ್ಭಿಕವಾಗಿ ಪ್ರತಿರೋಧ ಭುಗಿಲೆದ್ದಿದ್ದವು. ಆದಾಗ್ಯೂ, ರಾಜಕೀಯವು ಸಂಪೂರ್ಣವಾಗಿ ಕ್ರೀಡೆಯೊಂದಿಗೆ ಬೆಸೆದುಕೊಂಡಿರಲಿಲ್ಲ. 

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಸಂಬಂಧಿತ ಸಂಸ್ಥೆಗಳಿಗೆ ಅತಿ ದೊಡ್ಡ ಆದಾಯ ತರುವ ಪಂದ್ಯ ಇದು. ಒಂದು ವಾರದ ಹಿಂದಿನವರೆಗೂ ಈ ಪಂದ್ಯ ನಡೆಯುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ‘ಬಾಂಗ್ಲಾ ತಂಡವನ್ನು ಅನರ್ಹಗೊಳಿಸಿದ್ದಕ್ಕಾಗಿ ಭಾರತದ ಎದುರು ಆಡಬಾರದು’ ಎಂದು ಪಾಕಿಸ್ತಾನ ಸರ್ಕಾರ ತಮ್ಮ ತಂಡಕ್ಕೆ ಸೂಚಿಸಿತ್ತು. ಆದರೆ ಹಲವು ನಾಟಕೀಯ ಬೆಳವಣಿಗೆಗಳ ನಂತರ ಹೋದ ಸೋಮವಾರ ಪಾಕಿಸ್ತಾನವು ‘ಯೂ ಟರ್ನ್’ ತೆಗೆದುಕೊಂಡಿತು. ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಕರೆ ಮಾಡಿ ಭಾರತದ ಎದುರು ಆಡುವಂತೆ ಮನವಿ ಮಾಡಿದ್ದರು. ಅಲ್ಲದೇ ಇನ್ನೂ ಕೆಲವು    ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆಗಳು ನಡೆದು  ‘ಪಂದ್ಯದಲ್ಲಿ ಆಡಲು ಪಾಕಿಸ್ತಾನ ಸಿದ್ಧವಾಗಿದೆ‘ ಎನ್ನುವ ಮೂಲಕ ಪ್ರಹಸನಕ್ಕೆ ತೆರೆಬಿದ್ದಿತ್ತು. 

ಭಾರತ ಮತ್ತು ಪಾಕ್ ಪಂದ್ಯಕ್ಕೆ ಯಾವುದೇ ಹೆಚ್ಚುವರಿ ಪ್ರಚಾರದ ಅಗತ್ಯವಿಲ್ಲ, ಕಳೆದ ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್  ಅವರು ಪಾಕ್ ತಂಡದ  ಸಲ್ಮಾನ್ ಅಲಿ  ಆಘಾ ಅವರ ಕೈಕುಲುಕಲು ನಿರಾಕರಿಸಿದರು. ಇದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಫೈನಲ್‌ನಲ್ಲಿ ಗೆದ್ದ ನಂತರ, ಭಾರತ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕಿಸ್ತಾನ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿತು. ಇದರಿಂದ ಕುಪಿತಗೊಂಡ ನಖ್ವಿ ಟ್ರೋಫಿಯನ್ನು ಎಸಿಸಿ ಕಚೇರಿಗೆ ಕೊಂಡೊಯ್ದು ಕಪಾಟಿನಲ್ಲಿಟ್ಟಿದ್ದಾರೆ. 

ಇದೆಲ್ಲದರಾಚೆ; ಭಾರತವು ಆಟದಂಗಳದಲ್ಲಿ ಪಾಕಿಸ್ತಾನಕ್ಕಿಂತ ಮುಂದೆ ಇದೆ. ಇಲ್ಲಿಯವರೆಗಿನ ಒಟ್ಟು 16 ಟಿ20 ಪಂದ್ಯಗಳಲ್ಲಿ 13ರಲ್ಲಿ ಭಾರತ ಮೇಲುಗೈ ಸಾಧಿಸಿದೆ. ಹಾಲಿ ಚಾಂಪಿಯನ್ ಭಾರತವು ಪ್ರೇಮದಾಸ ಕ್ರೀಡಾಂಗಣದ ಮೇಲ್ಮೈನಲ್ಲಿ ಚೆಂಡು ನಿಧಾನಗತಿಯಿಂದ ಸಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಂತ್ರಗಾರಿಕೆಯನ್ನು ರೂಪಿಸಬೇಕಿದೆ. ತಂಡದಲ್ಲಿ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಅರ್ಷದೀಪ್ ಸಿಂಗ್ ಹಾಗೂ ಬ್ಯಾಟರ್ ರಿಂಕು ಸಿಂಗ್ ವಿಶ್ರಾಂತಿ ಪಡೆಯಬಹುದು. ಜಸ್‌ಪ್ರೀತ್ ಬೂಮ್ರಾ ಅವರಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎರಡನೇ ಮಧ್ಯಮವೇಗಿಯಾಗಿ ಜೊತೆ ನೀಡಬಹುದು.    

ಹೊಟ್ಟೆನೋವಿನ ಸಮಸ್ಯೆಯಿಂದ  ಬಳಲಿರುವ ಅಭಿಷೇಕ್ ಶರ್ಮಾ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮಾತ್ರ ಭಾರತದ ಚಿಂತೆ. ಸಂಜು ಸ್ಯಾಮ್ಸನ್ ದೊಡ್ಡ ಇನಿಂಗ್ಸ್ ಆಡಬೇಕು. ಇಶಾನ್ ಕಿಶನ್ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು.  ತಿಲಕ್ ವರ್ಮಾ, ಸೂರ್ಯಕುಮಾರ್ ಮತ್ತು ಶಿವಂ ದುಬೆ ಅವರು ಸ್ಥಿರ ಪ್ರದರ್ಶನ ನೀಡಿದರೆ ದೊಡ್ಡ ಮೊತ್ತ ಗಳಿಸುವುದು ಸಾಧ್ಯವಾಗಲಿದೆ. 

ಪಾಕಿಸ್ತಾನ ತಂಡದ ವೇಗಿ ಶಹೀನ್ ಶಾ ಅಫ್ರಿದಿ ಮತ್ತು ಸ್ಪಿನ್ನರ್ ಉಸ್ಮಾನ್ ತಾರೀಖ್ 

ಈ ಬಾರಿ ಭಾರತದ ಪಾರಮ್ಯವನ್ನು ಮೀರಿನಿಲ್ಲುವ ಛಲದಲ್ಲಿರುವ ಪಾಕ್ ತಂಡವು ತನ್ನ ಸ್ಪಿನ್ ಬೌಲರ್‌ಗಳಾದ ಅಬ್ರಾರ್ ಅಹಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಮತ್ತು ಉಸ್ಮಾನ್ ತಾರೀಕ್ ಅವರ ಮೇಲೆ ವಿಶ್ವಾಸವಿಟ್ಟಿದೆ. ಶರವೇಗದ ಬೌಲರ್‌ಗಳನ್ನು ಕ್ರಿಕೆಟ್ ಲೋಕಕ್ಕೆ ನೀಡಿದ ಹೆಮ್ಮೆಯನ್ನು ವ್ಯಕ್ತಪಡಿಸುವ ಪಾಕಿಸ್ತಾನವು ಸ್ಪಿನ್‌ ಬೌಲರ್‌ಗಳ ಮೇಲೆ ಅವಲಂಬಿತವಾಗುತ್ತಿರುವುದು ಅಸಾಂಪ್ರದಾಯಿವಾಗಿರುವುದಂತೂ ನಿಜ. ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿಯೂ ಇದು ಸ್ಪಿನ್ನರ್‌ಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಅದರಲ್ಲೂ ತಮ್ಮ ‘ಪಾಜ್ ಆ್ಯಂಡ್‌ ಡೆಲಿವರಿ’ ಶೈಲಿಯಿಂದ ಚರ್ಚೆಗೆ ಗ್ರಾಸವಾಗಿರುವ ಸ್ಪಿನ್ನರ್ ಉಸ್ಮಾನ್ ತಾರೀಕ್ ಅವರತ್ತ ಗಮನ ಹೆಚ್ಚಿದೆ. ಅವರು ನಾಲ್ಕು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕೆಲವು ಮಾಜಿ ಆಟಗಾರರು ಅವರ ಶೈಲಿಯನ್ನು 'ಚಕಿಂಗ್' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕೆಲವರು ಅವರ ಶೈಲಿ ನಿಯಮಬದ್ಧ ಎಂದೂ ವಾದಿಸಿದ್ದಾರೆ.

ಒಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸೂಪರ್ 8ರ ಹಂತಕ್ಕೆ ಪ್ರವೇಶಿಸಲಿದೆ.    

ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ 
ಮಳೆ ಸಾಧ್ಯತೆ
ವಾಯುಭಾರ ಕುಸಿತದ ಕಾರಣದಿಂದಾಗಿ ಕೊಲಂಬೊದಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ನಡೆಯುವ ಸಮಯದಲ್ಲಿಯೇ ಮಳೆಯಾಗಬಹುದು.  ಜೋರಾಗಿ ಮಳೆ ಸುರಿದರೆ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.