ADVERTISEMENT

T20 WC: ಗೆಲುವಿನೊಂದಿಗೆ ಭಾರತದ ಟಿ20 ವಿಶ್ವಕಪ್ ಅಭಿಯಾನ ಅಂತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2021, 17:13 IST
Last Updated 8 ನವೆಂಬರ್ 2021, 17:13 IST
ನಮೀಬಿಯಾ ವಿರುದ್ಧ ಭಾರತಕ್ಕೆ 9 ವಿಕೆಟ್ ಗೆಲುವು
ನಮೀಬಿಯಾ ವಿರುದ್ಧ ಭಾರತಕ್ಕೆ 9 ವಿಕೆಟ್ ಗೆಲುವು   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಟ್ವೆಂಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗೆಲುವಿನ ವಿದಾಯ ಹಾಡಿದ್ದಾರೆ. ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಅರುಣ್ ಭರತ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಪಾಲಿಗೂ ಇದು ವಿದಾಯದ ಪಂದ್ಯವಾಗಿತ್ತು.

ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿರುವ ಭಾರತ ತಂಡವು ಸತತ ಮೂರನೇ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದೆ. ಆ ಮೂಲಕ ಐದು ಪಂದ್ಯಗಳಲ್ಲಿ ಒಟ್ಟು ಆರು ಅಂಕಗಳನ್ನು ಕಲೆ ಹಾಕಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಭಾರತದ ವಿಶ್ವಕಪ್ ಕನಸು ಭಗ್ನಗೊಳ್ಳಲು ಕಾರಣವಾಗಿದೆ.

ರವೀಂದ್ರ ಜಡೇಜ (16ಕ್ಕೆ 3) ಹಾಗೂ ಆರ್. ಅಶ್ವಿನ್ (20ಕ್ಕೆ 3) ಸ್ಪಿನ್ ಮೋಡಿಗೆ ಸಿಲುಕಿರುವ ನಮೀಬಿಯಾ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 132 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಬಳಿಕ ಗುರಿ ಬೆನ್ನತ್ತಿದ ಭಾರತ 15.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ರೋಹಿತ್ ಶರ್ಮಾ (56) ಹಾಗೂ ಕೆ.ಎಲ್. ರಾಹುಲ್ (54*) ಆಕರ್ಷಕ ಅರ್ಧಶತಕ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ಈ ಮೊದಲು ನಮೀಬಿಯಾ ಪರ ಆರಂಭಿಕರಾದ ಸ್ಟೀಫನ್ ಬಾರ್ಡ್ ಹಾಗೂ ಮೈಕೆಲ್ ವಾನ್ ಲಿಂಗೆನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 33 ರನ್ ಪೇರಿಸಿದರು.

ಆದರೆ ಆರಂಭಿಕ ಜೋಡಿಯ ಪತನದ ಬೆನ್ನಲ್ಲೇ ಹಿನ್ನಡೆಯನ್ನು ಅನುಭವಿಸಿತು. ಬಾರ್ಡ್ 21 ಹಾಗೂ ಮೈಕೆಲ್ 14 ರನ್ ಗಳಿಸಿ ಔಟಾದರು.

ಜಡೇಜ ಹಾಗೂ ಅಶ್ವಿನ್ ದಾಳಿಗೆ ಸಿಲುಕಿದ ನಮೀಬಿಯಾ ಅಲ್ಲಿಂದ ಬಳಿಕ ಚೇತರಿಸಿಕೊಳ್ಳಲಾಗಲಿಲ್ಲ. ಅಲ್ಲದೆ 72 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು.

ಕೊನೆಯ ಹಂತದಲ್ಲಿ ಡೇವಿಡ್ ವೀಸ್ (26), ಜಾನ್‌ ಫ್ರಿಲಿಂಕ್ (15*) ಹಾಗೂ ರುಬೆನ್ ಟ್ರಂಪಲ್‌ಮ್ಯಾನ್ (13*) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಭಾರತದ ಪರ ಜಡೇಜ ಹಾಗೂ ಅಶ್ವಿನ್ ತಲಾ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಮೊಹಮ್ಮದ್ ಶಮಿ 39 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.