
ಮುಂಬೈ: ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡ ಭಾನುವಾರ ಅನನುಭವಿ ನೇಪಾಳ ಕೈಲಿ ಸ್ವಲ್ಪದರಲ್ಲೇ ಮುಖಭಂಗದಿಂದ ಪಾರಾಯಿತು. ರೋಚಕವಾಗಿದ್ದ ಟಿ20 ವಿಶ್ವಕಪ್ ಸಿ ಗುಂಪಿನ ಹಣಾಹಣಿಯಲ್ಲಿ ನೇಪಾಳ ತಂಡ ಕೊನೆಯ ಓವರಿನವರೆಗೆ ಹೋರಾಟ ತೋರಿದರೂ, ಇಂಗ್ಲೆಂಡ್ ನಾಲ್ಕು ರನ್‌ಗಳ ಗೆಲುವು ಪಡೆದು ನಿಟ್ಟುಸಿರುಬಿಟ್ಟಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗೆ 184 ರನ್ ಹೊಡೆಯಿತು. ಇದಕ್ಕೆ ಉತ್ತರವಾಗಿ ಹಿಮಾಲಯದ ತಪ್ಪಲಿನ ಪುಟ್ಟ ತಂಡ 6 ವಿಕೆಟ್‌ಗೆ 180 ರನ್ ಗಳಿಸಿ ನಿರಾಶೆ ಅನುಭವಿಸಿತು.
ವೀರೋಚಿತ ಆಟವಾಡಿದ ಲೋಕೇಶ್ ಬಾಮ್ (ಔಟಾಗದೇ 39, 20 ಎಸೆತ) ಅವರು ನೇಪಾಳ ತಂಡವನ್ನು ಗೆಲುವಿನತ್ತ ಮುನ್ನಡೆಸುವಂತೆ ಕಂಡಿತ್ತು. ಆದರೆ ಅವರಿಗೆ ‘ಗೆಲುವಿನ ಸ್ಪರ್ಶ’ ನೀಡಲಾಗಲಿಲ್ಲ.
ಕೊನೆಯ ಓವರಿನಲ್ಲಿ ನೇಪಾಳ ಗೆಲುವಿಗೆ 10 ರನ್‌ಗಳು ಬೇಕಿದ್ದವು. ಆದರೆ ವೇಗಿ ಸ್ಯಾಮ್ ಕರನ್ ಯಾರ್ಕರ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. ತಂಡ ಐದು ರನ್ ಗಳಿಸಲಷ್ಟೇ ಶಕ್ತವಾಯಿತು. 17,000 ಪ್ರೇಕ್ಷಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ನೇಪಾಳದ ಅಭಿಮಾನಿಗಳು ತಲೆಮೇಲೆ ಕೈಹೊತ್ತರು.
ನಾಯಕ ರೋಹಿತ್ ಪೌದೆಲ್ (39), ದೀಪೇಂದ್ರ ಸಿಂಗ್ ಐರಿ (39) ಮತ್ತು ಕುಶಲ್ ಭುರ್ತೆಲ್ (29) ಅವರು ತಂಡದ ಹೋರಾಟಕ್ಕೆ ಬಲ ನೀಡಿದ ಬಳಿ ಲೋಕೇಶ್ ಬೀಸಾಟವಾಡಿದರು. ನಾಲ್ಕು ಬೌಂಡರಿ ಜೊತೆ ಎರಡು ಸಿಕ್ಸರ್ ಬಾರಿಸಿದರು. ಜೋಫ್ರಾ ಆರ್ಚರ್ ಎಸೆದ 18ನೇ ಓವರಿನಲ್ಲಿ 22 ರನ್ ಬಾಚುವ ಮೂಲಕ ನೇಪಾಳ ಚಾರಿತ್ರಿಕ ಗೆಲುವಿನತ್ತ ಸಾಗಿತು.
ಪೌದೆಲ್ ಮತ್ತು ಐರಿ ಮಧ್ಯೆ ಮೂರನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟವಾಡಿದ್ದರು.
ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಜೇಕಬ್ ಬೆಥೆಲ್ (55) ಮತ್ತು ನಾಯಕ ಹ್ಯಾರಿ ಬ್ರೂಕ್ (53) ಅವರ ಆಕ್ರಮಣಕಾರಿ ಅರ್ಧ ಶತಕಗಳ ನೆರವಿನಿಂದ 7 ವಿಕೆಟ್‌ಗೆ 184 ರನ್‌ಗಳ ಉತ್ತಮ ಮೊತ್ತ ಗಳಿಸಿತು.
ಎಡಗೈ ಬ್ಯಾಟರ್ ಬೆಥೆಲ್ ತಮ್ಮ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಸಾಮರ್ಥ್ಯ ತೋರಿ 35 ಎಸೆತಗಳಲ್ಲಿ ನಾಲ್ಕು ಬೌಂಡರಿ, ಅಷ್ಟೇ ಸಿಕ್ಸರ್‌ಗಳನ್ನು ಬಾರಿಸಿದರು. ಬ್ರೂಕ್ ಹೊಣೆಯಿಂದ ಆಡಿ 32 ಎಸೆತಗಳ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಹೊಡೆದರು.
ಫಿಲ್ ಸಾಲ್ಟ್ (1), ಜೋಸ್ ಬಟ್ಲರ್ (26) ಮತ್ತು ಟಾಮ್ ಬ್ಯಾಂಟಮ್ (2) ಅವರು ಕೇವಲ 57 ರನ್‌ಗಳಾಗುವಷ್ಟರಲ್ಲಿ ನಿರ್ಗಮಿಸಿದರು. ಈ ವೇಳೆ ಬೆಥೆಲ್– ಬ್ರೂಕ್ ನಾಲ್ಕನೇ ವಿಕೆಟ್‌ಗೆ 71 ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ ನೇಪಾಳ ಬೌಲರ್‌ಗಳು ಇಂಗ್ಲೆಂಡ್ ದೊಡ್ಡ ಮೊತ್ತ ಗಳಿಸದಂತೆ ತಡೆದರು.
ಕೊನೆಯಲ್ಲಿ ವಿಲ್ ಜಾಕ್ಸ್ 18 ಎಸೆತಗಳಲ್ಲಿ 39 ರನ್ ಸೂರೆ ಮಾಡಿದ್ದರಿಂದ ಇಂಗ್ಲೆಂಡ್ ಸವಾಲಿನ ಮೊತ್ತ ಗಳಿಸಿತು. ವೇಗಿಗಳಾದ ದೀಪೇಂದ್ರ ಐರೀ (23ಕ್ಕೆ2) ಮತ್ತು ನಂದನ್ ಯಾದವ್ (25ಕ್ಕೆ2) ಯಶಸ್ವಿ ಎನಿಸಿದರು.
ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್: 20 ಓವರುಗಳಲ್ಲಿ 7 ವಿಕೆಟ್‌ಗೆ 184 (ಜೋಸ್ ಬಟ್ಲರ್ 26, ಬೆಥೆಲ್ 55, ಹ್ಯಾರಿ ಬ್ರೂಕ್ 53, ವಿಲ್ ಜಾಕ್ಸ್ ಔಟಾಗದೇ 39; ದೀಪೇಂದ್ರ ಐರೀ 23ಕ್ಕೆ2, ನಂದನ್ ಯಾದವ್ 25ಕ್ಕೆ2)
ನೇಪಾಳ: 20 ಓವರುಗಳಲ್ಲಿ 6 ವಿಕೆಟ್‌ಗೆ 180 (ಕುಶಲ್ ಭುರ್ತೆಲ್ 29, ರೋಹಿತ್ ಪೌದೆಲ್ 39, ದೀಪೇಂದ್ರ ಸಿಂಗ್ ಐರೀ 44, ಲೋಕೇಶ್ ಬಾಮ್ ಔಟಾಗದೇ 39; ಲಿಯಾಮ್ ಡಾಸನ್ 21ಕ್ಕೆ2).
ಪಂದ್ಯದ ಆಟಗಾರ: ವಿಲ್ ಜಾಕ್ಸ್: ಔಟಾಗದೇ 39 ಮತ್ತು 17ಕ್ಕೆ1.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.