
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು
ಮುಂಬೈ: ಭದ್ರತಾ ಕಾರಣಗಳನ್ನು ನೀಡಿ ಮುಂಬರುವ ತನ್ನ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರ ಮಾಡಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿರುವುದಾಗಿ ವರದಿಯಾಗಿದೆ.
ಈ ಕುರಿತು 'ಇಎಸ್‌ಪಿಎನ್ ಕ್ರಿಕ್‌ಇನ್ಫೋ' ವರದಿ ಮಾಡಿದೆ.
'ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶದ ಆಟಗಾರರು ಭಾರತಕ್ಕೆ ತೆರಳಬೇಕು ಅಥವಾ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ' ಎಂಬ ಖಡಕ್ ಸೂಚನೆಯನ್ನು ಬಿಸಿಬಿಗೆ ಐಸಿಸಿ ರವಾನಿಸಿದೆ ಎಂದು ತಿಳಿದು ಬಂದಿದೆ.
ಆದರೆ ಇಂತಹ ಯಾವುದೇ ಸ್ಪಷ್ಟನೆ ಬಂದಿಲ್ಲ ಎಂದು ಬಿಸಿಬಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ನಿರಾಕರಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಕೋರಿಕೆ ಸಲ್ಲಿಸಿತ್ತು.
ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್‌ನಿಂದ ತನ್ನ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆಯ ಮೇರೆಗೆ ಕೈಬಿಟ್ಟಿರುವುದನ್ನು ಪ್ರತಿಭಟಿಸಿ ಐಪಿಎಲ್ ಪ್ರಸಾರವನ್ನು ನಿಷೇಧಿಸುವುದಾಗಿ ಬಾಂಗ್ಲಾದೇಶ ಹೇಳಿತ್ತು.
ಐಸಿಸಿ 2026ರ ಟ್ವೆಂಟಿ-20 ವಿಶ್ವಕಪ್‌ಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸುತ್ತಿದೆ. 20 ತಂಡಗಳು ಭಾಗವಹಿಸುವ ಈ ಬಹುನಿರೀಕ್ಷಿತ ಟೂರ್ನಿಯು ಫ್ರೆಬ್ರುವರಿ 7ರಿಂದ ಆರಂಭವಾಗಿ ಮಾರ್ಚ್ 8ರವರೆಗೆ ಮುಂದುವರಿಯಲಿದೆ.
'ಸಿ' ಗುಂಪಿನಲ್ಲಿರುವ ಬಾಂಗ್ಲಾದೇಶ ಮೂರು ಪಂದ್ಯಗಳು ಕೋಲ್ಕತ್ತದಲ್ಲಿ ಹಾಗೂ ಕೊನೆಯ ಪಂದ್ಯ ಮುಂಬೈಯಲ್ಲಿ ನಿಗದಿಯಾಗಿವೆ. ಫೆ.7ರಂದು ವೆಸ್ಟ್‌ಇಂಡೀಸ್, ಫೆ. 9ರಂದು ಇಟಲಿ ಮತ್ತು ಫೆ.14ರಂದು ಇಂಗ್ಲೆಂಡ್ ವಿರುದ್ಧ ಮತ್ತು ಫೆ.17ರಂದು ಮುಂಬೈಯಲ್ಲಿ ನೇಪಾಳ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.