ADVERTISEMENT

T20 World Cup: ವಿರಾಟ್ ಪರ್ವದ ಮತ್ತೊಂದು ಅಧ್ಯಾಯ

ಗಿರೀಶದೊಡ್ಡಮನಿ
Published 24 ಅಕ್ಟೋಬರ್ 2022, 4:12 IST
Last Updated 24 ಅಕ್ಟೋಬರ್ 2022, 4:12 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಾಗ, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಹೊಡೆದಾಗ ಮತ್ತು ಭಾರತ ತಂಡದ ನಾಯಕರಾಗಿ ಆಯ್ಕೆಯಾದಾಗಲೂ ರೋಹಿತ್ ಶರ್ಮಾ ಇಷ್ಟೊಂದು ಖುಷಿಪಟ್ಟಿದ್ದನ್ನು ನೋಡಿಲ್ಲ.

ಭಾನುವಾರ ರಾತ್ರಿ ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವಿಜಯದ ರೂವಾರಿ ವಿರಾಟ್ ಕೊಹ್ಲಿಯನ್ನು ಅವರು ತಮ್ಮ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ರೀತಿ ಹಾಗಿತ್ತು. ಇದೊಂದು ಅಪ್ಪಟ ಕ್ರೀಡಾಸ್ಪೂರ್ತಿಯ ಅಚ್ಚಳಿಯದ ಚಿತ್ರ. ಗೆದ್ದರೂ, ಸೋತರೂ ತಂಡಸ್ಪೂರ್ತಿ, ಏಕತೆ ಹಾಗೂ ಸ್ನೇಹಸೌರಭವನ್ನು ಸಾರವುದೇ ಕ್ರೀಡೆಯ ಪರಮೋಚ್ಚ ಉದ್ದೇಶವಲ್ಲವೇ?

ಭಾರತವಷ್ಟೇ ಅಲ್ಲ. ಯಾವುದೇ ದೇಶದ ಕ್ರಿಕೆಟ್‌ ಇತಿಹಾಸವನ್ನು ತೆಗೆದುನೋಡಿದರೂ ನಾಯಕನೊಬ್ಬ ತನ್ನ ತಂಡದ ಜಯದ ರೂವಾರಿಯನ್ನು ಈ ರೀತಿ ಹೊತ್ತು ಮೆರೆಸಿದ ಮತ್ತೊಂದು ಉದಾಹರಣೆ ಸಿಗಲಿಕ್ಕಿಲ್ಲ. ಮೆಚ್ಚಿ ಮಾತನಾಡಿರಬಹುದು. ಹೊಗಳಿರಬಹುದು. ತಬ್ಬಿ ಅಭಿನಂದಿಸಿರಬಹುದು.ಆದರೆ ತಮ್ಮ ನೆಚ್ಚಿನ ತಾರೆಯಿಂದ ನಾಯಕತ್ವ ಕಿತ್ತುಕೊಂಡ ಎಂದು ವಿರಾಟ್ ಅಭಿಮಾನಿಗಳ ಅಸಮಾಧಾನಕ್ಕೆ ಗುರಿಯಾಗಿರುವ ರೋಹಿತ್ ಒಂದು ಹೆಜ್ಜೆ ಮುಂದಿಟ್ಟರು. ತಮ್ಮ ಹಾಗೂ ಮಾಜಿ ನಾಯಕನ ನಡುವೆ ಇರುವುದು ವೃತ್ತಿವೈಷಮ್ಯವಲ್ಲ, ಸ್ನೇಹ ಹಾಗೂ ಪರಸ್ಪರ ಮೆಚ್ಚಿಕೊಳ್ಳುವ ಗುಣ ಎಂಬುದನ್ನು ಜಗಜ್ಜಾಹೀರು ಮಾಡಿದರು.

ADVERTISEMENT

ಇಲ್ಲಿ ಇನ್ನೊಂದು ಮಾತು ಹೇಳಬೇಕು. ಕ್ರಿಕೆಟ್‌ನಲ್ಲಿ ವೈಫಲ್ಯ ಮತ್ತು ಯಶಸ್ಸು ಎರಡೂ ಶಾಶ್ವತವಲ್ಲ. ಆದರೆ ಅವೆರಡನ್ನೂ ನಿರ್ವಹಿಸುವ ರೀತಿ ಮಾತ್ರ ಮುಖ್ಯ. ಬರೊಬ್ಬರಿ ಒಂದು ವರ್ಷದ ಹಿಂದೆ (2021ರ ಅಕ್ಟೋಬರ್ 24) ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಸೋತಿತ್ತು. ಆಗ ನಾಯಕರಾಗಿದ್ದ ವಿರಾಟ್ ಕೊಹ್ಲಿ ಎದುರಿಸಿದ್ದ ಟೀಕೆಗಳಿಗೆ ಲೆಕ್ಕವಿದೆಯೇ?

ಏಕೆಂದರೆ, ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವು ತನ್ನ ನೆರೆಯ ರಾಷ್ಟ್ರದ ಎದುರು ಸೋತಿದ್ದು ಅದೇ ಮೊದಲು. ಸತತ 12 ಜಯಗಳ ಸರಪಣಿ ಅಂದು ತುಂಡಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಹಾಗೂ ಸಹ ಆಟಗಾರರನ್ನು ಟೀಕಾಕಾರರು ಹುರಿದು ಮುಕ್ಕಿದ್ದರು. ಆದರೆ ಇವತ್ತು. ಹೊಗಳಿಕೆಯ ಮಹಾಪೂರವೇ ಹರಿಯುತ್ತಿದೆ. ಅವರ ಅಜೇಯ 82 ರನ್‌ಗಳ ಇನಿಂಗ್ಸ್‌ಆ ರೀತಿಯಾಗಿತ್ತು.

ನಾಯಕ ರೋಹಿತ್ ಹೇಳುವಂತೆ; ವಿರಾಟ್ ಹಾಗೂ ಭಾರತದ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಈ ಪಂದ್ಯಕ್ಕೇ ಅಗ್ರಸ್ಥಾನ. ಇವತ್ತು ಅತ್ಯಂತ ಶಕ್ತಿಯುತ ಬೌಲಿಂಗ್‌ ವಿಭಾಗವಿರುವ ತಂಡಗಳಲ್ಲಿ ಪಾಕಿಸ್ತಾನ ಪ್ರಮುಖವಾದದ್ದು. 160 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡ 31 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಕಂಗಾಲಾಗಿತ್ತು. 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ತುಂಬಿದ್ದ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳ ಮುಖಗಳು ಕಳೆಗುಂದಿದ್ದವು. ಟಿವಿ ಮುಂದೆ ಕುಳಿತಿದ್ದವರಲ್ಲಿ ಬಹುತೇಕರು ಚಾನೆಲ್‌ ಬದಲಿಸಲು ರಿಮೋಟ್ ಕೈಗೆತ್ತಿಕೊಂಡಿರಬಹುದು. ಹಾಟ್‌ಸ್ಟಾರ್ ಆ್ಯಪ್‌ ನೋಡುಗರೂ ಬೇರೆ ಆ್ಯಪ್‌ಗಳತ್ತ ಚಿತ್ತ ಹರಿಸಿರಬಹುದು. ಆದರೆ ಇನ್ನೊಂದು ದೊಡ್ಡ ವರ್ಗದ ಅಭಿಮಾನಿಗಳಿಗೆ ಕ್ರೀಸ್‌ನಲ್ಲಿದ್ದ ಕೊಹ್ಲಿ ಮತ್ತು ಅವರೊಡಗೂಡಿದ ಹಾರ್ದಿಕ್ ಪಾಂಡ್ಯ ಮೇಲೆ ಒಂದಿಷ್ಟು ವಿಶ್ವಾಸವಿತ್ತು. ಅದು ಹುಸಿಯಾಗಲಿಲ್ಲ. 21 ಎಸೆತಗಳಲ್ಲಿ 12 ರನ್‌ ಗಳಿಸಿದ್ದ ಕೊಹ್ಲಿ ಇಷ್ಟು ದೊಡ್ಡ ಸವಾಲು ಮೀರುವರೇ ಎಂಬ ಪ್ರಶ್ನೆಯೂ ಕಾಡಿತ್ತು.

12ನೇ ಓವರ್‌ನಲ್ಲಿ ಕೊಹ್ಲಿ ಹಾಗೂ ಪಾಂಡ್ಯ ಸೇರಿ ಮೂರು ಸಿಕ್ಸರ್‌ಗಳಿದ್ದ 20 ರನ್‌ಗಳನ್ನು ಸೂರೆ ಮಾಡಿದಾಗ ಅಭಿಮಾನಿಗಳ ವಲಯದಲ್ಲಿ ’ದೀಪಾವಳಿ‘ ಸಂಭ್ರಮ ಮರುಕಳಿಸಿತು. ನಂತರದ ಹಾವು–ಏಣಿ ಆಟದಲ್ಲಿ ವಿರಾಟ್–ಹಾರ್ದಿಕ್ ಜೊತೆಯಾಟ ರಂಗೇರಿತು. ಹ್ಯಾರಿಸ್ ರವೂಫ್ ಹಾಕಿದ 19ನೇ ಓವರ್‌ನಲ್ಲಿ ವಿರಾಟ್ ಹೊಡೆದ ಎರಡು ಸಿಕ್ಸರ್‌ಗಳು ಜಯದ ವಿಶ್ವಾಸವನ್ನು ಬಲಗೊಳಿಸಿದವು. ಅದರಲ್ಲೂ ಕೊನೆಯ ಎಸೆತದಲ್ಲಿ ಫೈನ್‌ ಲೆಗ್‌ ಮೇಲೆ ಫ್ಲಿಕ್ ಮಾಡಿದ ರೀತಿ ಚಿತ್ತಾಪಹಾರಿಯಾಗಿತ್ತು. ಇನಿಂಗ್ಸ್‌ನ ಆರಂಭಿಕ ಹಂತದಲ್ಲಿ ಎರಡು ವಿಕೆಟ್ ಗಳಿಸಿ ಪೆಟ್ಟು ಕೊಟ್ಟಿದ್ದ ಹ್ಯಾರಿಸ್ ರವೂಫ್‌ ದಂಗಾಗಿಹೋದರು.

ಕೊನೆಯ ಓವರ್‌ನಲ್ಲಿ 16 ರನ್‌ಗಳಷ್ಟೇ ಜಯಕ್ಕೆ ಬೇಕಾದಾಗಲೂ ವಿಜಯದ ಚಿತ್ತ ಒಂದೆಡೆ ಇರಲಿಲ್ಲ. ಸ್ಪಿನ್ನರ್ ಮೊಹಮ್ಮದ್ ನವಾಜ್‌ಗೆ ಚೆಂಡು ಕೈಗಿತ್ತ ಬಾಬರ್ ಆಜಂ ಫೀಲ್ಡಿಂಗ್‌ನಲ್ಲಿಯೂ ಕೆಲವು ಬದಲಾವಣೆ ಮಾಡಿದರು. ಆದರೆ ಅವರಿಗೂ ಗೊತ್ತಿತ್ತು ತಮ್ಮ ನೆಚ್ಚಿನ ಆಟಗಾರ ಮತ್ತು ರನ್‌ ಮಷಿನ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆಂದು. ನವಾಜ್ ತಕ್ಕಮಟ್ಟಿಗೆ ತಮ್ಮ ನಾಯಕನ ವಿಶ್ವಾಸ ಉಳಿಸಿಕೊಂಡರು ಎನ್ನಲಡ್ಡಿಯಿಲ್ಲ. ಏಕೆಂದರೆ ಅಂತಹ ಒತ್ತಡದಲ್ಲಿಯೂ ಹಾರ್ದಿಕ್ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್‌ಗಳನ್ನು ಗಳಿಸುವಲ್ಲಿ ಅವರು ಯಶಸ್ವಿಯಾದರು. ಆದರೆ, ವಿರಾಟ್‌ ಕೊಹ್ಲಿಯನ್ನು ಏಮಾರಿಸಲು ಅವರು ಮಾಡಿದ ಫುಲ್‌ಟಾಸ್ ಪ್ರಯೋಗ ಕೈಕೊಟ್ಟಿತು. ತಮ್ಮ ನಡುಮಟ್ಟ ದಾಟಿ ಬಂದ ಚೆಂಡನ್ನು ಕೊಹ್ಲಿ ಮುಲಾಜಿಲ್ಲದೇ ಸಿಕ್ಸರ್‌ಗೆತ್ತಿದರು. ಅಂಪೈರ್ ನೋಬಾಲ್ ಘೋಷಿಸಿದರು. ಫ್ರೀ ಹಿಟ್‌ ಮಾಡುವ ಎಸೆತವು ವಿರಾಟ್ ಸ್ಟಂಪ್ ಎಗರಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಯ ಒಂದು ಎಸೆತದಲ್ಲಿ ಎರಡು ರನ್ ಬೇಕಿದ್ದಾಗ ’ಸೂಪರ್ ಕಂಪ್ಯೂಟರ್‌‘ ಅಶ್ವಿನ್ ಕ್ರೀಸ್‌ನಲ್ಲಿದ್ದರು. ನವಾಜ್ ಹಾಕಿದ ವೈಡ್ ಎಸೆತವನ್ನು ಕೆಣಕದೇ ಸುಮ್ಮನೆ ನಿಂತರು. ನಂತರದ ಎಸೆತವನ್ನು ಹೊಡೆದ ಅಶ್ವಿನ್ ಒಂದು ರನ್‌ ಓಡಿದಾಗ ಇಡೀ ದೇಶವೇ ಸಂಭ್ರಮಿಸಿತು. ಪಟಾಕಿಗಳು ಸಿಡಿದ ಸದ್ದು, ಕೇಕೆ, ವಿಜಯಘೋಷಗಳು ಪ್ರತಿಧ್ವನಿಸಿದವು.

ಇಡೀ ಪಂದ್ಯವೇ ಒಂದು ತೂಕವಾದರೆ; ಕೊನೆಯ ಓವರ್‌ನ ಆಟವೇ ಮತ್ತೊಂದು ತೂಕ.

ಹೃದಯಬಡಿತ ಏರುಪೇರು ಮಾಡಿದ ರೋಚಕತೆಯ ಓವರ್‌ ಅದು.ಅದೇನೆ ಇರಲಿ; ಸತತ ಮೂರು ವರ್ಷಗಳ ಕಾಲ ಒಂದೂ ಶತಕವಿಲ್ಲದೇ ಪರದಾಡಿದ್ದವರು ಕೊಹ್ಲಿ. ಯಾವುದೇ ಮಾದರಿಯಲ್ಲಿಯೂ ಆತ್ಮವಿಶ್ವಾಸದ ಇನಿಂಗ್ಸ್‌ ಆಡುವಲ್ಲಿ ಯಶಸ್ವಿಯಾಗಿರಲಿಲ್ಲ. ಇತ್ತೀಚೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಇದೇ ಪಾಕಿಸ್ತಾನದ ಎದುರು ಅರ್ಧಶತಕ ಹಾಗೂ ಅಫ್ಗಾನಿಸ್ತಾನ ಎದುರು ಶತಕ ಬಾರಿಸಿದ್ದರು. ಅದು ಅವರು ಲಯವನ್ನು ಮರಳಿ ಕಂಡುಕೊಂಡಿದ್ದರ ಸೂಚನೆಯಾಗಿತ್ತು. ಇದೀಗ ಮೆಲ್ಬರ್ನ್ ಅಂಗಳದಲ್ಲಿ ಅವರು ದಾಖಲಿಸಿದ ಅಜೇಯ ಅರ್ಧಶತಕ ಈ ಹಿಂದಿನ ಎಲ್ಲ ಶ್ರೇಷ್ಠ ಇನಿಂಗ್ಸ್‌ಗಳಿಗೆ ಕಿರೀಟಪ್ರಾಯವಾಯಿತು. ನಿರಾಶೆ, ಹಿನ್ನಡೆ ಮತ್ತು ಟೀಕೆಗಳನ್ನು ಎದುರಿಸಿ ನಿಂತರೆ ಸಿಗುವ ದೊಡ್ಡ ಯಶಸ್ಸಿನ ಪ್ರತೀಕವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.