
ಸೂರ್ಯಕುಮಾರ್ ಯಾದವ್
ಗುವಾಹಟಿ: ಮುಂದಿನ ವರ್ಷ ನಡೆಯಲಿರುವ ಬಹುನಿರೀಕ್ಷಿತ ಟ್ವೆಂಟಿ-20 ವಿಶ್ವಕಪ್‌ಗೂ ಮುನ್ನ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಕೇವಲ 10 ಪಂದ್ಯಗಳಷ್ಟೇ ಬಾಕಿ ಉಳಿದಿವೆ.
ಹಾಗಾಗಿ ವಿಶ್ವಕಪ್‌ಗೆ ಆರಿಸಲಾಗುವ ಅದೇ ತಂಡವನ್ನು ಹೊಸ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಆರಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ವಿಶ್ವಕಪ್‌ಗೂ ಮುನ್ನ ಕೇವಲ 10 ಪಂದ್ಯಗಳು ಮಾತ್ರ ಬಾಕಿ ಇವೆ. ಗಾಯದ ಹೊರತಾಗಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಂಡಬರುವ ಸಾಧ್ಯತೆ ಕಡಿಮೆಯಾಗಿದೆ ಎಂದು ಮೂಲಗಳು ಹೇಳಿವೆ.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. 20 ತಂಡಗಳ ಚುಟುಕು ವಿಶ್ವಕಪ್ ಫೆಬ್ರುವರಿ 7ರಂದು ಆರಂಭವಾಗಲಿದೆ.
ಐಸಿಸಿ ನಿಯಮದ ಪ್ರಕಾರ ಅಂತಿಮ 15 ಸದಸ್ಯರ ಬಳಗವನ್ನು ಟೂರ್ನಿ ಆರಂಭವಾಗುವ ಒಂದು ತಿಂಗಳಿಗೂ ಮುಂಚಿತವಾಗಿ ಸಲ್ಲಿಸಬೇಕಿದೆ. ಅಲ್ಲದೆ ನಿಗದಿತ ಕಟ್-ಆಫ್ ದಿನಾಂಕದವರೆಗೆ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶ ಇರುತ್ತದೆ.
ಟಿ20 ವಿಶ್ವಕಪ್‌ಗೂ ಮುನ್ನ ಭಾರತ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಭಾಗವಹಿಸಲಿದೆ. ಈ ಸರಣಿಯು ಜನವರಿ 21ರಿಂದ ಆರಂಭವಾಗಲಿದೆ.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾರತ ಆಡಲಿದೆ. ಈ ಸರಣಿಯು ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್‌ಗೆ ತಂಡವನ್ನು ಪರೀಕ್ಷಿಸಲು ಕೊನೆಯ ಅವಕಾಶವಾಗಿರಲಿದೆ.
2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಜಯಿಸಿತ್ತು. ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ವಿಶ್ವಕಪ್ ಆಯೋಜನೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.