ADVERTISEMENT

RCB ಬಗ್ಗೆ ಕೆಟ್ಟದಾಗಿ ಮಾತನಾಡಿದ ರೋಹಿತ್ ಅಭಿಮಾನಿಯನ್ನು ಕೊಂದ ಕೊಹ್ಲಿ ಫ್ಯಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2022, 6:40 IST
Last Updated 15 ಅಕ್ಟೋಬರ್ 2022, 6:40 IST
ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ (ಪಿಟಿಐ ಚಿತ್ರಗಳು)
ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ (ಪಿಟಿಐ ಚಿತ್ರಗಳು)   

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂವಿರಾಟ್‌ ಕೊಹ್ಲಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ಕೊಲೆ ಮಾಡಿರುವ ಯುವಕ ವಿರಾಟ್ ಕೊಹ್ಲಿ ಅಭಿಮಾನಿಯಾದರೆ, ಸಾವಿಗೀಡಾದವ ರೋಹಿತ್‌ ಶರ್ಮಾ ಅಭಿಮಾನಿ.

ಮೃತ ಯುವಕನನ್ನು ಪಿ. ವಿಘ್ನೇಶ್ (24) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ 21 ವರ್ಷದ ಎಸ್.ಧರ್ಮರಾಜ್ ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅರಿಯಾಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರಾದ ಇಬ್ಬರೂ ಅಪ್ಪಟ ಕ್ರಿಕೆಟ್ ಅಭಿಮಾನಿಗಳಾಗಿದ್ದರು. ಐಟಿಐ ಮುಗಿಸಿದ್ದ ವಿಘ್ನೇಶ್ ಸಿಂಗಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಿಘ್ನೇಶ್ ಮತ್ತುಧರ್ಮರಾಜ್ ಮಂಗಳವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ಮದ್ಯ ಸೇವಿಸಿ, ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಆಟಗಾರ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಗಲಾಟೆ ಮಾಡಿಕೊಂಡಿದ್ದರುಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ವಿಘ್ನೇಶ್ ಅಪಹಾಸ್ಯ ಮಾಡಿದ್ದರು. ಇದರಿಂದ ಕುಪಿತಗೊಂಡ ಧರ್ಮರಾಜ್, ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಜತೆಗೆ ಬ್ಯಾಟ್‌ನಿಂದ ತಲೆಗೆ ಹೊಡೆದಿದ್ದಾನೆ. ಘಟನೆ ಬಳಿಕ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.