ADVERTISEMENT

IND vs AUS ಟೆಸ್ಟ್: ತಿಂಗಳ ಹಿಂದೆ 36ಕ್ಕೆ ಆಲೌಟ್, ಇಂದು ಸರಣಿ ಗೆಲುವು!

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 10:13 IST
Last Updated 19 ಜನವರಿ 2021, 10:13 IST
ಗೆಲುವಿನ ಬಳಿಕ ಮೈದಾನಕ್ಕೆ ಓಡಿ ಬಂದ ಸಿರಾಜ್: ಸೈನಿ, ಪಂತ್ ಜೊತೆ ಸಂಭ್ರಮಾಚರಣೆ – ರಾಯಿಟರ್ಸ್ ಚಿತ್ರ
ಗೆಲುವಿನ ಬಳಿಕ ಮೈದಾನಕ್ಕೆ ಓಡಿ ಬಂದ ಸಿರಾಜ್: ಸೈನಿ, ಪಂತ್ ಜೊತೆ ಸಂಭ್ರಮಾಚರಣೆ – ರಾಯಿಟರ್ಸ್ ಚಿತ್ರ   

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಇಂದು ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ 36ಕ್ಕೆ ಆಲೌಟ್ ಆದ ಕಹಿಯುಂಡ ಒಂದು ತಿಂಗಳ ಬಳಿಕ ಅದೇ ದಿನ ಸರಣಿ ಗೆಲುವಿನ ಸಿಹಿಯುಂಡಿದೆ!

ಹೌದು, ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಡಿಸೆಂಬರ್ 19ರಂದು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಇದುವರೆಗೆ ಭಾರತವು ಒಂದು ಇನ್ನಿಂಗ್ಸ್‌ನಲ್ಲಿ ಗಳಿಸಿದ ಕನಿಷ್ಠ ಮೊತ್ತ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಯಾವೊಬ್ಬ ಬ್ಯಾಟ್ಸ್‌ಮನ್ ಸಹ ಎರಡಂಕಿ ತಲುಪಿರಲಿಲ್ಲ.

ಭಾರತದ ಈ ಕಳಪೆ ಸಾಧನೆಗೆ ಮಾಜಿ ಕ್ರಿಕೆಟಿಗರೂ ಸೇರಿದಂತೆ ಅಭಿಮಾನಿಗಳ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಇದು ಮರೆಯಬೇಕಾದ ಒಟಿಪಿ 49204084041’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜರೆದಿದ್ದರು.

ಅದಾದ ಬಳಿಕ ಮೈ ಕೊಡವಿ ಎದ್ದ ಭಾರತ ತಂಡವು ನಂತರದ ಪಂದ್ಯದಲ್ಲಿ ಜಯ ಗಳಿಸಿ ಸರಣಿಯಲ್ಲಿ ಸಮ–ಬಲ ಸಾಧಿಸಿತ್ತು. ಮೂರನೇ ಪಂದ್ಯ ಡ್ರಾ ಮಾಡಿಕೊಂಡಿತ್ತು.

ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿಯಬೇಕಾಗಿ ಬಂದದ್ದು, ಆಸ್ಟ್ರೇಲಿಯಾ ಆಟಗಾರರ ಸ್ಲೆಡ್ಜಿಂಗ್, ಪ್ರೇಕ್ಷಕರ ಜನಾಂಗೀಯ ನಿಂದನೆ ಇತ್ಯಾದಿ ಎಲ್ಲ ಸಮಸ್ಯೆ–ಸವಾಲುಗಳನ್ನು ಮೆಟ್ಟಿ ನಿಂತ ಯುವ ಆಟಗಾರರು ಇದೀಗ ‘ಗಾಬಾ’ದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸಿರಾಜ್ ಅವರ ಬೌಲಿಂಗ್, ಪಂತ್ ಹಾಗೂ ಗಿಲ್ ದಿಟ್ಟ ಬ್ಯಾಟಿಂಗ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.