ADVERTISEMENT

ಟಿ20 ವಿಶ್ವಕಪ್‌ನಲ್ಲಿ ಸೋಲು: ರೋಹಿತ್‌ ಪಡೆಗೆ ಆತ್ಮಾವಲೋಕನ ಕಾಲ

2015ರಿಂದೀಚೆಗೆ ಐಸಿಸಿ ಟ್ರೋಫಿ ನಾಲ್ಕು ಸೆಮಿಫೈನಲ್‌ಗಳಲ್ಲಿ ಮುಗ್ಗರಿಸಿದ ತಂಡ

ಆರ್.ಕೌಶಿಕ್
Published 11 ನವೆಂಬರ್ 2022, 19:32 IST
Last Updated 11 ನವೆಂಬರ್ 2022, 19:32 IST
ರೋಹಿತ್ ಶರ್ಮಾ ಹಾಗೂ ಜೋಸ್ ಬಟ್ಲರ್
ರೋಹಿತ್ ಶರ್ಮಾ ಹಾಗೂ ಜೋಸ್ ಬಟ್ಲರ್   

ಅಡಿಲೇಡ್: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು ‘ದ ರಿಡೀಮ್ ಟೀಮ್’ ಚಲನಚಿತ್ರವನ್ನು ವೀಕ್ಷಿಸಿದರೆ ಒಳಿತು.

ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ತಂಡದ ಪುನರುತ್ಥಾನದ ಕತೆಯೇ ಈ ಸಿನಿಮಾ. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಮೂರು ಪಂದ್ಯಗಳಲ್ಲಿ ಪರಾಭವಗೊಂಡಿತು. ಆದರೆ ಇದಕ್ಕೂ ಮುಂಚಿನ ಒಲಿಂಪಿಕ್ ಇತಿಹಾಸದಲ್ಲಿ ತಂಡವು ಕೇವಲ ಎರಡು ಬಾರಿ ಸೋತಿತ್ತು. ಅಥೆನ್ಸ್‌ನ ಸೋಲು ಅಮೆರಿಕ ತಂಡದ ಆತ್ಮಾವಲೋಕನಕ್ಕೆ ದಾರಿಯಾಯಿತು.

ಅಲ್ಲಿಯ ಎನ್‌ಬಿಎ (ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್) ಲೀಗ್ ಟೂರ್ನಿಯಿಂದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಕ್ಷೇತ್ರದ ಹಿನ್ನಡೆಗೆ ಕಾರಣವಾಗುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. 2007ರಲ್ಲಿ ಕೊಬೆ ಬ್ರಯಂಟ್ ನಾಯಕತ್ವದ ಬಳಗದಲ್ಲಿ ಮೂಲದಿಂದಲೇ ಸುಧಾರಣೆಗಳಿಗೆ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳಿಗೆ ಚಾಲನೆ ನೀಡಲಾಯಿತು. ‘ಸೋಲುವುದನ್ನು ನೋಡಿ ಬಸವಳಿದಿದ್ದೇನೆ’ ಎಂದು ಬ್ರಯಂಟ್ ತಮ್ಮ ಸಹಆಟಗಾರರಿಗೆ ಹೇಳಿದ್ದನ್ನು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದಾಗ ನೆನಪಿಸಿಕೊಂಡಿದ್ದರು.

ADVERTISEMENT

ಅಮೆರಿಕದ ಎನ್‌ಬಿಎ ತರಹ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ (ಐಪಿಎಲ್) ಇದೆ. ಅಪರಿಚಿತ ಪ್ರತಿಭೆಗಳನ್ನು ಹೀರೊಗಳನ್ನಾಗಿ ರೂಪಿಸುವ ವೇದಿಕೆ ಇದಾಗಿದೆ. ಒತ್ತಡದ ಸನ್ನಿವೇಶದಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಆದರೆ ಈ ಹಂತವೇ ಅಂತಿಮವಲ್ಲ. ರಾಷ್ಟ್ರೀಯ ತಂಡದಲ್ಲಿ ಪ್ರತಿನಿಧಿಸುವಾಗಲೂ ಈ ಸಾಮರ್ಥ್ಯ ವಿನಿಯೋಗವಾಗಬೇಕು. ಹಾಗಾಗದಿದ್ದಾಗ ನಿಜವಾದ ಸಮಸ್ಯೆ ಆರಂಭವಾಗುತ್ತದೆ.

2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿ ಸೇರಿದಂತೆ ಇಲ್ಲಿಯವರೆಗೆ ನಾಲ್ಕು ಐಸಿಸಿ ಟೂರ್ನಿಗಳ ಸೆಮಿಫೈನಲ್‌ನಲ್ಲಿ ಭಾರತವು ಸೋತಿದೆ. ಇದಕ್ಕೆ ಐಪಿಎಲ್‌ ಕಾರಣ ಎಂಬ ಟೀಕೆಗಳು ಕೇಳಿಬರುತ್ತಿವೆ. ಐಪಿಎಲ್ ಟೂರ್ನಿಗಳಿಂದಾಗಿ ಹಲವು ಉತ್ತಮ ಆಟಗಾರರು ರಾಷ್ಟ್ರೀಯ ತಂಡಕ್ಕೆ ಲಭ್ಯರಾಗಿದ್ದಾರೆ ಎನ್ನುವುದೂ ಸತ್ಯ. ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಹಾಗೂ ಬಲಾಢ್ಯ ಟಿ20 ಫ್ರ್ಯಾಂಚೈಸಿ ಲೀಗ್ ಐಪಿಎಲ್ ಎಂಬುದರಲ್ಲಿ ಸಂಶಯವೇ ಇಲ್ಲ. ಭಾರತ ಕೇಂದ್ರಿತವಾಗಿರುವುದರಿಂದ ಈ ಟೂರ್ನಿಯಲ್ಲಿ ಇಲ್ಲಿಯ ಆಟಗಾರರಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ.

ಆದರೆ ಈ ಎಲ್ಲ ಸಂಪನ್ಮೂಲಗಳೂ ಭಾರತ ತಂಡಕ್ಕೆ ವಿಶ್ವಕಪ್ ಗೆದ್ದುಕೊಡದಿದ್ದರೆ ಎಲ್ಲೋ, ಏನೋ ಸಮಸ್ಯೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ವರ್ಕ್‌ಲೋಡ್ ನಿರ್ವಹಣೆ ಮತ್ತಿತರ ಕ್ರಮಗಳ ಜೊತೆಗೆ ಟಿ20 ಪರಿಣತರನ್ನು ಒಳಗೊಳ್ಳುವಿಕೆಗೆ ಚಿತ್ತ ಹರಿಸಬೇಕು.

ಗುರುವಾರ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಸೋತ ಭಾರತ ತಂಡದಲ್ಲಿದ್ದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಆರ್. ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರು ಮೂರು ಮಾದರಿಗಳಲ್ಲಿ ಆಡುವ ಅನುಭವಿಗಳು. ಜಸ್‌ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜ ಕೂಡ ಇದೇ ಸಾಲಿನಲ್ಲಿರುವ ಆಟಗಾರರು. ಆದರೆ, ಗಾಯದಿಂದಾಗಿ ಅವರು ಈ ಟೂರ್ನಿಗೆ ಅಲಭ್ಯರಾದರು. ಒಂದು ಮಾದರಿಯಿಂದ ಮತ್ತೊಂದಕ್ಕೆ ಬದಲಾಗುತ್ತ ಆಟಕ್ಕೆ ಹೊಂದಿಕೊಳ್ಳುವುದು ನಿಜಕ್ಕೂ ಸವಾಲು. ಇಂತಹ ಒತ್ತಡದಲ್ಲಿ ಆಟಗಾರರನ್ನು ಸದಾ ಉಲ್ಲಸಿತರಾಗಿ ಇರುವಂತೆ ಅಪೇಕ್ಷಿಸುವುದು ಹೇಗೆ? ಬಹುಮಾದರಿಯ ಆಟಗಾರರು, ಐಪಿಎಲ್ ಪ್ರತಿಭೆಗಳು ಹಾಗೂ ಟಿ20 ಪರಿಣತರೊಂದಿಗೆ ಸೇರಿಸಿ ಒಂದು ಗುಂಪನ್ನು ಸಿದ್ಧಗೊಳಿಸಬಹುದಲ್ಲವೇ?

ಪ್ರಸ್ತುತ ಈ ವಿಶ್ವಕಪ್‌ನಲ್ಲಿ ಭಾರತ ತಂಡದ ಅಸ್ಥಿರ ಬ್ಯಾಟಿಂಗ್ ಹಾಗೂ ಸತ್ವರಹಿತ ಬೌಲಿಂಗ್‌ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾಮನಬಿಲ್ಲಿನ ಕೊನೆಯಲ್ಲಿರುವ ಚಿನ್ನದ ಬಿಂದಿಗೆಯನ್ನು ಪಡೆಯಬೇಕಾದರೆ ಒಂದೇ ತಪ್ಪು ಪದೇ ಪದೇ ಮರುಕಳಿಸದಂತೆ ನೋಡಬೇಕು. ಕೆಲವು ಕ್ರಾಂತಿಕಾರಿ ಕ್ರಮಗಳನ್ನು ತಂದಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮುಂದೆಯೂ ಅದೇ ಹಾದಿಯಲ್ಲಿ ಮುಂದುವರಿಯಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.