ವಿರಾಟ್ ಕೊಹ್ಲಿ
ಚಿತ್ರಕೃಪೆ: ಎಕ್ಸ್
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪ್ರಶಸ್ತಿ ಗೆದ್ದುಕೊಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
18 ವರ್ಷದಿಂದ ಆರ್‌ಸಿಬಿಯಲ್ಲಿದ್ದುಕೊಂಡು ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಫೈನಲ್‌ನಲ್ಲಿ ಜಯಗಳಿಸುತ್ತಿದ್ದಂತೆ, ಭಾವುಕರಾಗಿದ್ದಾರೆ. ಆರ್‌ಸಿಬಿ ಟ್ರೋಫಿ ಗೆಲ್ಲುವುದು ಅವರ ಬಹುದೊಡ್ಡ ಕನಸಾಗಿತ್ತು.
ಫೈನಲ್‌ನಲ್ಲಿ ಆರ್‌ಸಿಬಿ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಮತ್ತು ಸಂಖ್ಯೆ 18ರ ಬಗ್ಗೆ ಹಲವು ಸಂಕಥನಗಳು ಹುಟ್ಟಿಕೊಂಡಿವೆ. ಕೊಹ್ಲಿ ಅವರಿಗೆ 18 ಅದೃಷ್ಟ ಸಂಖ್ಯೆಯಾಗಿದ್ದು, ಅದರಿಂದಲೇ ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪುಷ್ಠಿಕೊಡುವಂತೆ, 18ನೇ ಆವೃತ್ತಿ, ಜರ್ಸಿ ಸಂಖ್ಯೆ 18 ಮತ್ತು 03(ದಿನಾಂಕ)+06(ತಿಂಗಳು)+2025(ವರ್ಷ)=18... ನಿನ್ನೆಯ ಗೆಲುವಿಗೆ ‘18’ ಕಾರಣವೆಂದು ಕೆಲ ಅಭಿಮಾನಿಗಳು ವಾದಿಸುತ್ತಿದ್ದಾರೆ.
ಏತನ್ಮಧ್ಯೆ, ಸಂಖ್ಯೆ 18ರ ಬಗ್ಗೆ ವಿರಾಟ್ ಕೊಹ್ಲಿ ಅವರು ಮಾತನಾಡಿರುವ ಹಳೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2023ರಲ್ಲಿ ಸ್ಟಾರ್ ಸ್ಪೋರ್ಟ್‌ನಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ಕೊಹ್ಲಿ, ಸಂಖ್ಯೆ 18ರೊಂದಿಗೆ ತಮ್ಮ ಸಂಬಂಧವನ್ನು ವಿವರಿಸಿದ್ದಾರೆ.
‘ಸಂಖ್ಯೆ 18 ನನಗೆ ಕೇವಲ ಒಂದು ಸಂಖ್ಯೆಯಾಗಿತ್ತು. 18 ಸಂಖ್ಯೆಯ ಜರ್ಸಿಯನ್ನು ನನಗೆ ನೀಡಿದ್ದರು. ಆದರೆ ಅದು ನನ್ನ ವೃತ್ತಿಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿದೆ’ ಎಂದಿದ್ದಾರೆ.
‘2008ರ ಆಗಸ್ಟ್ 18ರಂದು ಭಾರತ ತಂಡಕ್ಕೆ ನಾನು ಪದಾರ್ಪಣೆ ಮಾಡಿದೆ. 2006 ಡಿಸೆಂಬರ್ 18ರಂದು ನನ್ನ ತಂದೆ ನಿಧನರಾದರು. ನನ್ನ ಜೀವನದ ಎರಡು ಮುಖ್ಯ ಘಟನೆಗಳು 18ರಂದೇ ನಡೆದಿವೆ’ ಎಂದು ಹೇಳಿದ್ದಾರೆ.
‘ನನ್ನ ಜರ್ಸಿ ಸಂಖ್ಯೆಯನ್ನು ಇಷ್ಟೊಂದು ಜನರು ಧರಿಸಿರುವುದನ್ನು ನೋಡುವುದು ನಿಜಕ್ಕೂ ಅದ್ಭುತ ಅನುಭವ’ ಎಂದೂ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ತಮ್ಮ ಒಡೆತನದ ಹೋಟೆಲ್ ಉದ್ಯಮಕ್ಕೆ ‘ಒನ್8’ ಎಂದು ಹೆಸರಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.