ಗರಿಯಾಬಂದ್: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯ ಮಡಗಾಂವ್ ಗ್ರಾಮದ ಯುವಕ ಮನೀಶ್ ಬಿಸಿ ಇತ್ತೀಚೆಗೆ ಹೊಸ ಸಿಮ್ ಖರೀದಿಸಿದ್ದರು. ಸಿಮ್ ಕ್ರಿಯಾಶೀಲಗೊಂಡ ನಂತರ ಬಂದ ಕರೆಗಳಿಗೆ ಅವರಷ್ಟೇ ಅಲ್ಲ, ಅವರ ಸ್ನೇಹಿತರ, ಬಂಧುಗಳೇ ದಂಗಾಗಿದ್ದಾರೆ. ಇದು ಯಾವುದೇ ಸಿನಿಮಾದ ಚಿತ್ರಕಥೆಗಿಂತ ಭಿನ್ನವಾದ ಘಟನೆಯಲ್ಲ.
ಮನೀಶ್ ಖರೀದಿಸಿದ್ದ ಸಿಮ್ ಕೆಲ ತಿಂಗಳುಗಳ ಹಿಂದೆ ಕ್ರಿಕೆಟರ್ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್‌ಗೆ ಸೇರಿದ್ದಾಗಿತ್ತು. ಸಿಮ್ ಕ್ರಿಯಾಶೀಲಗೊಳ್ಳುತ್ತಿದ್ದಂತೆ ಬರುತ್ತಿದ್ದ ಕರೆಗಳು ಕನಸೋ ಅಥವಾ ನನಸೋ ಎಂದೆನಿಸಿತು ಎಂದಿದ್ದಾರೆ ಮನೀಶ್.
ತಮ್ಮ ಸ್ನೇಹಿತ ಖೇಮರಾಜ್ ಅವರ ಬಳಿ ತೆರಳಿದ ಮನೀಶ್, ಇದು ನಿಜವೋ ಅಥವಾ ತಾಂತ್ರಿಕ ಸಮಸ್ಯೆಯೋ ತಿಳಿಯದಾಗಿದೆ ಎಂದು ನೆರವು ಕೋರಿದ್ದಾರೆ. ಅವರು ತಮ್ಮ ವಾಟ್ಸ್‌ಆ್ಯಪ್‌ನಲ್ಲಿ ಈ ಸಂಖ್ಯೆಯ ಡಿಪಿ ನೋಡಿದಾಗ, ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಚಿತ್ರ ಇರುವುದನ್ನು ಗಮನಿಸಿದ ಇವರಿಗೆ ಕುತೂಹಲ ಇನ್ನಷ್ಟು ಹೆಚ್ಚಾಯಿತು. ಇದರ ಬೆನ್ನಲ್ಲೇ ಸ್ಟಾರ್ ಕ್ರಿಕೆಟರ್‌ಗಳ ಕರೆಗಳೂ ಬರುತ್ತಿದ್ದವು.
ಕೃಷಿಕ ಗಜೇಂದ್ರ ಬಿಸಿ ಎಂಬುವವರ ಪುತ್ರ ಮನೀಶ್ ಜೂನ್ 28ರಂದು ತಮ್ಮ ಗ್ರಾಮದಿಂದ 8 ಕಿ.ಮೀ. ದೂರದಲ್ಲಿರುವ ದೇವಭೋಗ್‌ನ ಮಳಿಗೆಯೊಂದರಲ್ಲಿ ಜಿಯೊ ಸಿಮ್ ಖರೀದಿಸಿದ್ದರು.
ಸಿಮ್ ಕ್ರಿಯಾಶೀಲಗೊಳ್ಳುತ್ತಿದ್ದಂತೆ ಕರೆಗಳು ಬರಲಾರಂಭಿಸಿದವು. ಮೊದಲು ವಿರಾಟ್ ಕೊಹ್ಲಿ, ನಂತರ ಎಬಿ ಡಿ ವಿಲ್ಲಿರ್ಸ್, ಆಮೇಲೆ ಯಶ್ ದಯಾಳ್ ಹೀಗೆ ಒಬ್ಬರಾದ ಮೇಲೆ ಒಬ್ಬರ ಕರೆಗಳು ಬರುತ್ತಲೇ ಇದ್ದವು. ಆರಂಭದಲ್ಲಿ ಸ್ನೇಹಿತರೇ ಸೇರಿ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡಿದ್ದ ಮನೀಶ್‌ಗೆ ಕೆಲ ಹೊತ್ತಿನಲ್ಲೇ ಸತ್ಯದ ಅರಿವಾಗಿ ಸಂಭ್ರಮ ಮನೆ ಮಾಡಿತ್ತು. ಕೆಲವೇ ಹೊತ್ತಿನಲ್ಲಿ ಅವರು ಪ್ರಸಿದ್ಧಿ ಪಡೆದರು.
ಜುಲೈ 15ರಂದು ಬಂದ ಕರೆ ಸಿಮ್‌ನ ಹಿಂದಿನ ಮಾಲೀಕ ರಜತ್ ಪಾಟೀದಾರ್ ಅವರದ್ದು. ‘ಗೆಳೆಯಾ, ದಯವಿಟ್ಟು ಆ ಸಿಮ್ ಕಾರ್ಡ್ ನನಗೆ ಮರಳಿಸು’ ಎಂದು ಕೋರಿದ್ದಾರೆ. ಆದರೂ ಮನೀಶ್ ಮತ್ತು ಖೇಮರಾಜ್ ಇದೊಂದು ತಮಾಷೆಯ ಕರೆ ಎಂದೇ ಭಾವಿಸಿದ್ದರು. ಆದರೆ ನಂತರ ರಜತ್ ಪಾಟೀದಾರ್ ಅವರ ಧ್ವನಿ ಗಡುಸಾಯಿತು. ವಿಷಯ ಬಗೆಹರಿಸಲು ಪೊಲೀಸರನ್ನು ಕಳುಹಿಸುವ ಎಚ್ಚರಿಕೆ ನೀಡಿದಾಗಿ ಅಸಲಿಯತ್ತು ಇವರಿಗೆ ಅರಿವಾಯಿತು.
ಘಟನೆ ತಮಾಷೆಯಿಂದ ಗಂಭೀರಗೊಂಡಿದ್ದು, ಪೊಲೀಸರ ತಂಡ ಮನೆ ಬಾಗಿಲಿನಲ್ಲಿ ನಿಂತಿದ್ದನ್ನು ಕಂಡಾಗಲೇ.
ಈ ಕುರಿತು ಪ್ರತಿಕ್ರಿಯಿಸಿದ ಗರಿಯಾಬಂದ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ನೇಹಾ ಸಿನ್ಹಾ, ‘ದೂರಸಂಪರ್ಕ ನೀತಿಯಂತೆಯೇ ಸಿಮ್ ಬಳಸದ 90 ದಿನಗಳ ನಂತರ ಅದು ನಿಷ್ಕ್ರಿಯಗೊಳ್ಳುತ್ತದೆ. ನಂತರ ಅದನ್ನು ಹೊಸ ಬಳಕೆದಾರರಿಗೆ ನೀಡಲಾಗುತ್ತದೆ. ಮನೀಶ್ ಅವರ ಪ್ರಕರಣದಲ್ಲೂ ಇದೇ ಆಗಿದೆ. ರಜತ್ ಪಾಟೀದಾರ್ ಅವರ ಸಂಪರ್ಕದಲ್ಲಿರುವವರ ಕರೆಗಳು ಮನೀಶ್ ಅವರಿಗೆ ಬರಲಾರಂಭಿಸಿದವು. ಪಾಟೀದಾರ್ ಅವರು ಮಧ್ಯಪ್ರದೇಶದ ಸೈಬರ್ ಕೋಶಕ್ಕೆ ಕರೆ ಮಾಡಿ ಈ ಸಿಮ್ ಮರಳಿ ತನಗೆ ಕೊಡಿಸುವಂತೆ ಕೋರಿದ್ದರು’ ಎಂದು ತಿಳಿಸಿದ್ದಾರೆ.
‘ಅದರಂತೆಯೇ ಗರಿಯಾಬಂದ್ ಪೊಲೀಸರು ಮನೀಶ್ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಅವರ ಒಪ್ಪಿಗೆ ಪಡೆದು ಸಿಮ್ ಅನ್ನು ಪಾಟೀದಾರ್‌ಗೆ ಮರಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾರಿಂದಲೂ ಕಾನೂನು ಉಲ್ಲಂಘನೆಯಾಗಲೀ ಅಥವಾ ಅಪರಾಧವಾಗಲೀ ನಡೆದಿಲ್ಲ’ ಎಂದಿದ್ದಾರೆ.
ಆದರೆ ಕೆಲವೇ ದಿನಗಳ ಕಾಲ ಇದ್ದ ಸಿಮ್ ನೀಡಿದ ರೋಚಕ ಅನುಭವವನ್ನು ಮನೀಶ್, ಖೇಮರಾಜ್ ಹಾಗೂ ಅವರ ಕುಟುಂಬವರು ಈಗಲೂ ಸಿನಿಮಾದಂತಿದೆ ಎಂದೆನ್ನುತ್ತಿದ್ದಾರೆ.
‘ಹಳ್ಳಿಯಲ್ಲಿರುವ ನಾನು ಒಂದು ದಿನ ನನ್ನ ನೆಚ್ಚಿನ ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಎಬಿ ಡಿವಿಲಿಯರ್ಸ್ ಕರೆ ಮಾಡಿದ್ದರು. ಅವರು ಇಂಗ್ಲಿಷ್‌ನಲ್ಲಿ ಮಾತನಾಡಿದರು. ಅದು ನಮಗೆ ಅರ್ಥವಾಗಲಿಲ್ಲ. ಆದರೆ ಏನೋ ಒಂದು ಸಂತೋಷ ಉಂಟಾಯಿತು’ ಖೇಮರಾಜ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಕರೆಗಳು ಹೆಚ್ಚಾದಾಗ ಮನೀಶ್ ನನಗೆ ಫೋನ್ ನೀಡಿದ. ಕರೆ ಮಾಡಿದ ವಿರಾಟ್ ಕೊಹ್ಲಿ, ಯಶ್ ದಯಾಳ್ ಅವರು ‘ಪಾಟೀದಾರ್ ಫೋನ್ ನಿಮ್ಮ ಬಳಿ ಏಕಿದೆ’ ಎಂದರು. ಆಗ ನಡೆದ ಘಟನೆಯನ್ನು ಅವರಿಗೆ ವಿವರಿಸಿದೆ’ ಎಂದು ಖೇಮರಾಜ್ ತಿಳಿಸಿದರು.
ಕೊಹ್ಲಿ ಹಾಗೂ ಡಿವಿಲಿಯರ್ಸ್ ಧ್ವನಿ ಕೇಳಿ ಮನೀಶ್ ಮತ್ತು ಖೇಮರಾಜ್ ಮಾತ್ರವಲ್ಲ, ಇವರ ಇಡೀ ಗ್ರಾಮವೇ ಸಂಭ್ರಮದಲ್ಲಿ ತೇಲಾಡಿದೆ. ಕೆಲವೊಂದನ್ನು ವಿವರಿಸಲಾಗದು. ಈಗಲೂ ನಡೆದ ಎಲ್ಲಾ ಘಟನೆಗಳು ಕನಸೆಂದೇ ಭಾಸವಾಗುತ್ತದೆ ಎಂದು ಮನೀಶ್ ಸೋದರ ದೇಶಬಂಧು ಬಿಸಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
‘ಕಾಕತಾಳೀಯ ಎಂಬಂತೆ ಈ ಘಟನೆ ನಡೆದಿರಬಹುದು. ಆದರೆ ಇದು ನಿಜಕ್ಕೂ ಅದೃಷ್ಟವೇ ಸರಿ. ಬಹಳಷ್ಟು ಜನರು ಇಂಥ ಘಟನೆಯ ಕನಸು ಕಂಡಿರುತ್ತಾರೆ. ಆದರೆ ಅದು ನಿಜವಾಗಿದ್ದನ್ನು ನಾವು ಅನುಭವಿಸಿದ್ದೇವೆ. ನಮ್ಮ ನೆಚ್ಚಿನ ಕ್ರಿಕೆಟ್ ತಾರೆಯರೊಂದಿಗೆ ಮಾತನಾಡಿದ್ದೇವೆ’ ಎಂದು ದೇಶಬಂಧು ಹಿರಿಹಿರಿ ಹಿಗ್ಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.