ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ‘ಸೆಮಿ’ಯಲ್ಲಿ ವಿಲಿಯಮ್ಸನ್ ವಿಕೆಟ್ ಪಡೆದಿದ್ದ ವಿರಾಟ್

2008ರ ವಿಶ್ವಕಪ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 11:01 IST
Last Updated 8 ಜುಲೈ 2019, 11:01 IST
2008ರಲ್ಲಿ ವಿರಾಟ್‌ ಕೊಹ್ಲಿ ಮತ್ತು ಕೇನ್‌ ವಿಲಿಯಮ್ಸನ್‌
2008ರಲ್ಲಿ ವಿರಾಟ್‌ ಕೊಹ್ಲಿ ಮತ್ತು ಕೇನ್‌ ವಿಲಿಯಮ್ಸನ್‌    

ಮ್ಯಾನ್‌ಚೆಸ್ಟರ್‌: ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ 7ನೇ ಬಾರಿಗೆ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿದ್ದರೆ, ನ್ಯೂಜಿಲೆಂಡ್‌ 8ನೇ ಬಾರಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಂತಾಗಿದೆ.

ಟೀಂ ಇಂಡಿಯಾ ಮುನ್ನಡೆಸುತ್ತಿರುವ ವಿರಾಟ್‌ ಕೊಹ್ಲಿ ಮತ್ತು ಕಿವೀಸ್ ಸಾರಥಿ ಕೇನ್‌ ವಿಲಿಯಮ್ಸನ್‌ 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಸೆಮಿಫೈನಲ್ ಹಣಾಹಣಿಯಲ್ಲೂ ಎದುರಾಗಿದ್ದರು. ಆಗ ಬ್ಲೂ ಬಾಯ್ಸ್‌ ತಂಡವನ್ನು ಕೊಹ್ಲಿ ಹಾಗೂ ಕಪ್ಪು ಟೊಪ್ಪಿಯ ಪಡೆಯನ್ನು ವಿಲಿಯಮ್ಸನ್‌ ಅವರೇ ಮುನ್ನಡೆಸಿದ್ದರು ಎಂಬುದು ವಿಶೇಷ.

ಆಲ್‌ರೌಂಡರ್ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿ, ವಿಲಿಯಮ್ಸನ್‌ ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದ್ದರು. ಭಾರತ 3 ವಿಕೆಟ್‌ ಗೆಲುವು ಸಾಧಿಸಿತ್ತು.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ಎರಡರಲ್ಲೂ ಮಿಂಚಿದ್ದ ಕೊಹ್ಲಿ, 7 ಓವರ್‌ ಬೌಲಿಂಗ್‌ ಮಾಡಿ ಕೇವಲ 27 ರನ್‌ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲು ಬ್ಯಾಟಿಂಗ್‌ ನಡೆಸಿದ್ದ ಕಿವೀಸ್‌ ಪಡೆ, 8 ವಿಕೆಟ್‌ ನಷ್ಟಕ್ಕೆ 205 ರನ್‌ ದಾಖಲಿಸಿತ್ತು. ಆನಂತರದಲ್ಲಿ ತಲುಪಬೇಕಾಗದ ಗುರಿಯನ್ನು 191ರನ್‌ಗಳಿಗೆ ನಿಗದಿ ಪಡಿಸಲಾಗಿತ್ತು. ವಿರಾಟ್‌ ಪಡೆ ಮೂರು ವಿಕೆಟ್‌ ಉಳಿಸಿಕೊಂಡು ಗುರಿಯನ್ನು ಸಾಧಿಸಿತ್ತು. ಕೊಹ್ಲಿ ಆ ಪಂದ್ಯದಲ್ಲಿ 43 ರನ್‌ ಬಾರಿಸಿದ್ದರು.

ರವೀಂದ್ರ ಜಡೇಜಾ, ಟ್ರೆಂಟ್‌ ಬೌಲ್ಟ್‌ ಮತ್ತು ಟಿಮ್‌ ಸೌಥೀ ಸಹ ಮಲೇಷಿಯಾದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾಗಿಯಾಗಿದ್ದರು.ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿ, 19 ವರ್ಷದೊಳಗಿನವರ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ರೋಹಿತ್‌ ಶರ್ಮಾ 2008ರಲ್ಲಿ ಕಾಮನ್‌ವೆಲ್ತ್‌ ಬ್ಯಾಂಕ್‌ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡಿದ್ದರು. ಆಗ ರೋಹಿತ್‌ 10 ಇನಿಂಗ್ಸ್‌ಗಳಲ್ಲಿ 235 ರನ್‌ ಗಳಿಸಿದ್ದರು.

2003ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ–ನ್ಯೂಜಿಲೆಂಡ್‌ ಎದುರಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದಿತ್ತು. ನಂತರದ ವಿಶ್ವಕಪ್‌ ಪಂದ್ಯಗಳಲ್ಲಿ ಎರಡೂ ತಂಡಗಳು ಎದುರಾಗುವ ಅವಕಾಶವೇ ಒದಗಿ ಬಂದಿರಲಿಲ್ಲ. 16 ವರ್ಷಗಳ ನಂತರಇದೀಗ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ರೌಂಡ್‌ರಾಬಿನ್‌ ಹಂತದಲ್ಲಿ ಭಾರತ–ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು.

ವಿಶ್ವಕಪ್‌ ಕ್ರಿಕೆಟ್‌ ನಿಯಮಗಳ ಪ್ರಕಾರ, ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡ ಸೆಮಿಫೈನಲ್‌ನಲ್ಲಿ ಎದುರಾಗುತ್ತವೆ. ಜುಲೈ 9ರಂದು ಮ್ಯಾನ್‌ಚೆಸ್ಟರ್‌ನಲ್ಲಿ ಭಾರತ–ನ್ಯೂಜಿಲೆಂಡ್‌ ನಡುವೆ ಮೊದಲ ಸೆಮಿಫೈನಲ್‌ ಹಣಾಹಣಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.