
ವಿರಾಟ್ ಕೊಹ್ಲಿ
– ಪಿಟಿಐ ಚಿತ್ರ
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ತಂಡವು 76 ರನ್‌ಗಳಿಂದ ಸೋತು, ಸೆಮಿಫೈನಲ್‌ಗೂ ಮೊದಲೇ ಟೂರ್ನಿಯಿಂದ ನಿರ್ಗಮಿಸುವ ಆತಂಕದಲ್ಲಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಅನುಪಸ್ಥಿತಿ ಕುರಿತು ಕ್ರಿಕೆಟ್ ಪಂಡಿತರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ನೀಡಿದ್ದ 188 ರನ್‌ಗಳ ಗುರಿ ಬೆನ್ನಟ್ಟುವಾಗ, ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದ ಬಳಿಕ, ಅನೇಕರು ವಿರಾಟ್ ಕೊಹ್ಲಿ ಅವರು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದರ ಕುರಿತು ಮಾತನಾಡುತ್ತಿದ್ದಾರೆ.
ಟೀಮ್ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿ ಬಗ್ಗೆ ಮಾತನಾಡಲು ಪ್ರಮುಖ ಕಾರಣವೆಂದರೆ, ಭಾರತ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಮೂರು ಬಾರಿ ಮಾತ್ರ 160 ಅಥವಾ ಅದಕ್ಕಿಂತ ಹೆಚ್ಚಿನ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದೆ. ಆ ಮೂರು ಪಂದ್ಯಗಳಲ್ಲಿಯೂ ಕೊಹ್ಲಿಯವರೇ ಪಂದ್ಯಶ್ರೇಷ್ಠ ಎಂಬುದು ವಿಶೇಷ.
2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಅಜೇಯ 72 ರನ್, 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 82 ರನ್ ಹಾಗೂ 2022 ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೆಲ್ಬೋರ್ನ್‌ನಲ್ಲಿ ಅಜೇಯ 82 ಗಳಿಸಿದ್ದರು. ಆ ಮೂಲಕ ಮೂರು ಬಾರಿಯೂ ಬೃಹತ್ ಮೊತ್ತ ಚೇಸ್ ಮಾಡುವಾಗ ಎದೆಗುಂದದೆ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.
ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆ ಸಂದರ್ಭದಲ್ಲಿ ಭಾರತದ ಪರ ಕ್ರೀಸ್ ಕಚ್ಚಿ ನಿಂತು ಆಡುವ ಆಟಗಾರರ ಕೊರತೆ ಕಂಡುಬಂದಿದೆ. ಕೊನೆಯಲ್ಲಿ ಶಿವಂ ದುಬೆ ಕೊಂಚ ಹೋರಾಟ ನಡೆಸಿದ್ದನ್ನು ಹೊರತುಪಡಿಸಿದರೆ, ಉಳಿದ ಯಾವುದೇ ಬ್ಯಾಟರ್ ಕೂಡ ಭಾರತದ ಗೆಲುವಿಗೆ ನರವಾಗಲಿಲ್ಲ.
2024ರ ಟಿ20 ಫೈನಲ್‌ನಲ್ಲಿ ಮಿಂಚಿದ್ದ ಕೊಹ್ಲಿ
2024ರ ವಿಶ್ವಕಪ್ ಟೂರ್ನಿಯುದ್ಧಕ್ಕೂ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಅವರು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಭಾರತ ತಂಡವು ಆರಂಭಿಕ ಆಘಾತ ಎದುರಿಸಿದ್ದರ ಹೊರತಾಗಿಯೂ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಅಂದಿನ ಪಂದ್ಯದಲ್ಲಿ ಅವರು, 59 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ಅವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿತು.
2024ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜ ಅವರ ಜೊತೆ ವಿರಾಟ್ ಕೊಹ್ಲಿ ಕೂಡ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.