ADVERTISEMENT

ವಿರಾಟ್ ಕ್ರಿಕೆಟ್ ಲೋಕದ ರೊನಾಲ್ಡೊ, ಆತನದು ನಂಬಲಸಾಧ್ಯವಾದ ಬ್ಯಾಟಿಂಗ್ ಕೌಶಲ: ಲಾರಾ

ಭಾರತ ತಂಡದ ನಾಯಕನ್ನು ಹೊಗಳಿದ ವಿಂಡೀಸ್‌ ಬ್ಯಾಟಿಂಗ್‌ ದಿಗ್ಗಜ

ಏಜೆನ್ಸೀಸ್
Published 16 ಡಿಸೆಂಬರ್ 2019, 14:08 IST
Last Updated 16 ಡಿಸೆಂಬರ್ 2019, 14:08 IST
   

ನವದೆಹಲಿ: ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದಿಗ್ಗಜ ಬ್ರಯಾನ್‌ ಲಾರಾ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಹೋಲಿಸಿದ್ದಾರೆ.

‘ನನಗನಿಸುತ್ತದೆ ವಿರಾಟ್‌ ಕೊಹ್ಲಿಯು ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುವ ವಿಚಾರದಲ್ಲಿ ಹೊಂದಿರುವ ಬದ್ಧತೆಯು ಅವರಿಂದ ಅತ್ಯುತ್ತಮ ಪ್ರದರ್ಶನ ಮೂಡಿಬರಲು ಕಾರಣವಿರಬಹುದು. ಸಹ ಆಟಗಾರರಾದ ಕೆ.ಎಲ್‌.ರಾಹುಲ್‌ ಅಥವಾ ರೋಹಿತ್‌ ಶರ್ಮಾ ಅವರಿಗಿಂತ ಕೊಹ್ಲಿ ಉತ್ತಮ ಆಟಗಾರನೆಂದು ನಾನು ಯೋಚಿಸಿಲ್ಲ. ಆದರೆ, ತನ್ನನ್ನು ತಾನು ಸಿದ್ಧಗೊಳಿಸಿಕೊಳ್ಳುವ ವಿಚಾರದಲ್ಲಿ ಅವರು ಭಿನ್ನವಾಗಿ ನಿಲ್ಲುತ್ತಾರೆ. ನನ್ನ ಪ್ರಕಾರ ಅವರು ಕ್ರಿಕೆಟ್‌ ಲೋಕದ ಕ್ರಿಸ್ಟಿಯಾನೊ ರೊನಾಲ್ಡೊ’ ಎಂದು ಹೇಳಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಅವರು,‘ಕೊಹ್ಲಿಯ ಫಿಟ್‌ನೆಸ್‌ ಮಟ್ಟ ಮತ್ತು ಮನಸ್ಸಿನ ಶಕ್ತಿ ಅಸಮಾನವಾದುದು’ ಎಂದೂ ಹೊಗಳಿದ್ದಾರೆ.

ಟೆಸ್ಟ್‌ ಹಾಗೂ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ತಲಾ 10 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿರುವ ಲಾರಾ, ಭಾರತ ತಂಡದ ನಾಯಕ ಯಾವುದೇ ಕಾಲಘಟ್ಟದ ಉತ್ತಮ ತಂಡಗಳಲ್ಲಿ ಸ್ಥಾನಗಳಿಸಬಲ್ಲರು. ಅದು 1970ರ ವೇಳೆ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎನ್ನುವಂತಿದ್ದ ಕ್ಲೈವ್‌ ಲಾಯ್ಡ್‌ ನೇತೃತ್ವದ ತಂಡವಿರಲಿ ಅಥವಾ 1948ರಲ್ಲಿ ಅಜೇಯ ಎನಿಸಿದ್ದ ಡಾನ್‌ ಬ್ರಾಡ್ಮನ್‌ ತಂಡವೇ ಆಗಿರಲಿ ಎಂದೂ ಹೇಳಿದ್ದಾರೆ.

‘ಕೊಹ್ಲಿಯ ಬ್ಯಾಟಿಂಗ್ ಕೌಶಲ ನಂಬಲಸಾಧ್ಯವಾದದ್ದು. ಯಾವುದೇ ಕಾಲಘಟ್ಟದ ತಂಡದಿಂದಲೂ ಆತನನ್ನು ಕೈಬಿಡಲಾಗದು. ಒಬ್ಬ ಆಟಗಾರ ಆಟದ ಎಲ್ಲ ಮಾದರಿಯಲ್ಲಿಯೂ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಆಡುತ್ತಿದ್ದಾನೆ ಎಂದರೆ, ಅದು ಈವರೆಗೆ ಕೇಳಲು ಸಾಧ್ಯವಾಗದೇ ಇದ್ದ ವಿಶೇಷ ಸಂಗತಿಯೇ ಸರಿ’ ಎಂದಿದ್ದಾರೆ.

ಕೊಹ್ಲಿ ಮಾತ್ರವಲ್ಲದೆ ಇಂಗ್ಲೆಂಡ್‌ ಆಲ್ರೌಂಡರ್‌ ಬೆನ್ಸ್‌ ಸ್ಟೋಕ್ಸ್‌ ಬಗ್ಗೆಯೂ ಲಾರಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.