ADVERTISEMENT

ನ್ಯೂಜಿಲೆಂಡ್ ವಿರುದ್ಧ T20 ಸರಣಿ: ಭಾರತ ತಂಡದಲ್ಲಿ ಕೊಹ್ಲಿ, ರೋಹಿತ್‌ಗಿಲ್ಲ ಸ್ಥಾನ

ಏಜೆನ್ಸೀಸ್
Published 14 ಜನವರಿ 2023, 10:23 IST
Last Updated 14 ಜನವರಿ 2023, 10:23 IST
ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ (ಪಿಟಿಐ ಚಿತ್ರಗಳು)
ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ (ಪಿಟಿಐ ಚಿತ್ರಗಳು)   

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧದ ಏಕದಿನ, ಟಿ20 ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಚುಟುಕು ಕ್ರಿಕೆಟ್‌ ತಂಡದಲ್ಲಿ ದೀರ್ಘಾವಧಿಯ ಬದಲಾವಣೆಗೆ ಮುಂದಾಗಿರುವ ಆಯ್ಕೆ ಸಮಿತಿಯು 'ರನ್‌ ಮಷಿನ್‌' ಖ್ಯಾತಿಯ ವಿರಾಟ್‌ ಕೊಹ್ಲಿ ಹಾಗೂ ಮೂರೂ ಮಾದರಿಯ (ಟೆಸ್ಟ್‌, ಏಕದಿನ, ಟಿ20) ತಂಡದ ನಾಯಕ ರೋಹಿತ್‌ ಶರ್ಮಾ ಅವರನ್ನು ಟಿ20 ಸರಣಿಯಿಂದ ಹೊರಗಿಟ್ಟಿದೆ.

ಭಾರತ ತಂಡವು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಮುಗ್ಗರಿಸಿತ್ತು. ಇದು ತಂಡದಲ್ಲಿನ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಕೊಹ್ಲಿ ಮತ್ತು ರೋಹಿತ್‌, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಕೆಟ್‌ ಕೀಪರ್‌ ಬ್ಯಾಟರ್‌ ಕೆ.ಎಲ್‌.ರಾಹುಲ್ ಮತ್ತು ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಅವರು ಕೌಟುಂಬಿಕ ಕಾರಣಗಳಿಂದಾಗಿ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಆದರೆ, ಕೊಹ್ಲಿ ಮತ್ತು ರೋಹಿತ್‌ ಅವರನ್ನು ಟಿ20 ಸರಣಿಯಿಂದ ಕೈಬಿಟ್ಟಿರುವುದಕ್ಕೆ ಕಾರಣ ತಿಳಿಸಿಲ್ಲ.

ADVERTISEMENT

ರೋಹಿತ್‌ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಈ ವರ್ಷದ (2023ರ ಜನವರಿಯಲ್ಲಿ) ಆರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಗೂ ಪಾಂಡ್ಯ ತಂಡದ ಹೊಣೆ ಹೊತ್ತಿದ್ದರು. ಭಾರತ ಸರಣಿಯನ್ನು 2–1ರಿಂದ ಗೆದ್ದಿತ್ತು.

ಭಾರತ ಮತ್ತು ನ್ಯೂಜಿಲೆಂಡ್‌ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯಲ್ಲಿ ಸೆಣಸಾಟ ನಡಸಲಿವೆ. ಏಕದಿನ ಸರಣಿಯು ಜನವರಿ 18ರಿಂದ ಹಾಗೂ ಟಿ20 ಸರಣಿಯು ಜನವರಿ 27ರಿಂದ ಆರಂಭವಾಗಲಿದೆ.

ಇದಾದ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್‌ (ಫೆಬ್ರುವರಿ 9–ಮಾರ್ಚ್‌ 13) ಹಾಗೂ ಮೂರು ಏಕದಿನ ಪಂದ್ಯಗಳನ್ನು (ಮಾರ್ಚ್‌ 17–22) ಆಡಲಿದೆ. ಸದ್ಯ ಟೆಸ್ಟ್‌ ಸರಣೀಗಷ್ಟೇ ತಂಡ ಪ್ರಕಟಿಸಲಾಗಿದೆ.

ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್, ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಶಹಬಾಜ್‌ ಅಹ್ಮದ್‌, ಶಾರ್ದೂಲ್‌ ಠಾಕೂರ್, ಯುಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮ್ರಾನ್ ಮಲಿಕ್

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್‌ ಪಾಂಡ್ಯ (ನಾಯಕ), ಶುಭಮನ್‌ ಗಿಲ್‌, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಋತುರಾಜ್‌ ಗಾಯಕ್‌ವಾಡ್‌, ಸೂರ್ಯಕುಮಾರ್‌ ಯಾದವ್, ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌, ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಯುಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಅರ್ಶದೀಪ್‌ ಸಿಂಗ್‌, ಶಿವಂ ಮಾವಿ, ಪೃಥ್ವಿ ಶಾ, ಮುಕೇಶ್‌ ಕುಮಾರ್‌, ಉಮ್ರಾನ್ ಮಲಿಕ್

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ
ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌.ರಾಹುಲ್‌, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರಾ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮೇಶ್‌ ಯಾದವ್‌, ಜಯದೇವ್‌ ಉನದ್ಕತ್, ಸೂರ್ಯಕುಮಾರ್‌ ಯಾದವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.