ADVERTISEMENT

IPL 2025 | ಭವಿಷ್ಯದಲ್ಲಿ ಕೊಹ್ಲಿಯಂತಹ ಆಟಗಾರರು ಬರುವುದಿಲ್ಲ: ಸೆಹ್ವಾಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2025, 6:31 IST
Last Updated 6 ಏಪ್ರಿಲ್ 2025, 6:31 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪಿಟಿಐ ಚಿತ್ರ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಟಗಾರ ವಿರಾಟ್‌ ಕೊಹ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆ (ಏಪ್ರಿಲ್‌ 7ರಂದು) ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಆರ್‌ಸಿಬಿ ಈವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು, ಒಂದು ಪಂದ್ಯ ಸೋತಿದೆ. ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಎದುರು 59 ರನ್ ಗಳಿಸಿದ್ದ ಕೊಹ್ಲಿ, ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 31 ರನ್‌ ಬಾರಿಸಿದ್ದರು. ನಂತರದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಕೇವಲ 7 ರನ್‌ಗೆ ಔಟಾಗಿದ್ದರು.

ಆದಾಗ್ಯೂ ಕೊಹ್ಲಿಯ ಪ್ರದರ್ಶನದ ಬಗ್ಗೆ ಸೆಹ್ವಾಗ್ ಗುಣಗಾನ ಮಾಡಿದ್ದಾರೆ. ಬೆಂಗಳೂರು vs ಮುಂಬೈ ಪಂದ್ಯಕ್ಕೂ ಮುನ್ನ ಮಾತನಾಡಿರುವ ಅವರು, ಭವಿಷ್ಯದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಕೊಹ್ಲಿಯಷ್ಟು ಸ್ಥಿರವಾಗಿ ರನ್‌ ಗಳಿಸುವ ಆಟಗಾರರು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೆಹ್ವಾಗ್‌, 2007ರಲ್ಲಿ ಟಿ20 ವಿಶ್ವಕಪ್‌ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದರು.

ಈ ಬಾರಿಯ ಐಪಿಎಲ್‌ ಆರಂಭಕ್ಕೂ ಮುನ್ನ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದ ಭಾರತ ತಂಡದಲ್ಲಿ ಆಡಿದ್ದ ಕೊಹ್ಲಿ, 5 ಇನಿಂಗ್ಸ್‌ಗಳಲ್ಲಿ 54.50 ಸರಾಸರಿಯಲ್ಲಿ 218 ರನ್‌ ಗಳಿಸಿದ್ದರು. ಭಾರತ ಪರ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿದ್ದರು. ಅಲ್ಲದೆ, ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಅರ್ಧಶತಕ ಬಾರಿಸಿ, ಟೀಂ ಇಂಡಿಯಾ ಜಯಕ್ಕೆ ಕಾರಣರಾಗಿದ್ದರು.

ಏಕದಿನ ಮಾದರಿಯಲ್ಲಿ ಅತಿಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿದ್ದ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರನ್ನು 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಕೊಹ್ಲಿ ಹಿಂದಿಕ್ಕಿದ್ದರು. ಹಾಗೆಯೇ, ಆ ಟೂರ್ನಿಯಲ್ಲಿ 765 ರನ್‌ ಗಳಿಸುವ ಮೂಲಕ, ಒಂದೇ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟರ್‌ ಎನಿಸಿಕೊಂಡಿದ್ದರು.

ಐಪಿಎಲ್‌–2025 ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಐದು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಜೂನ್‌ 20 ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.