ಲಾಹೋರ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇಂದಿನ (ಶನಿವಾರ) ಪಂದ್ಯದಲ್ಲಿ ಮುಖಾಮುಖಿಯಾಗಿವೆ.
ಲಾಹೋರ್‌ನ ಗಢಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಆರಂಭಕ್ಕೂ ಮುನ್ನ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ಮುಜುಗರಕ್ಕೀಡಾಗಿದೆ.
ಟೂರ್ನಿಯ 4ನೇ ಪಂದ್ಯ ಇದಾಗಿದ್ದು, ಆರಂಭಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ರಾಷ್ಟ್ರಗೀತೆ ಹಾಡಲು ಸಜ್ಜಾಗಿದ್ದರು. ಇಂಗ್ಲೆಂಡ್ ಸರದಿ ಮುಗಿದ ನಂತರ, ಆಸ್ಟ್ರೇಲಿಯಾದ ರಾಷ್ಟ್ರಗೀತೆ ಪ್ರಸಾರವಾಗಬೇಕಿತ್ತು. ಆದರೆ, ಆಗ ಕೆಲವು ಸೆಕೆಂಡುಗಳವರೆಗೆ ಭಾರತದ ರಾಷ್ಟ್ರಗೀತೆ ಪ್ರಸಾರವಾಗಿದೆ.
'ಭಾರತ ಭಾಗ್ಯ ವಿಧಾತ' ಎಂಬುದು ಧ್ವನಿವರ್ಧಕಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ರಾಷ್ಟ್ರಗೀತೆಯನ್ನು ನಿಲ್ಲಿಸಲಾಗಿದೆಯಾದರೂ, ಅಚ್ಚರಿಗೊಂಡ ಆಸಿಸ್ ಅಭಿಮಾನಿಗಳು ಹಾಗೂ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಜೋರಾಗಿ ಕೂಗಿದ್ದಾರೆ. ಈ ಸಂದರ್ಭದ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆಸಿಸ್‌ಗೆ ಕಠಿಣ ಗುರಿ
ಇಂಗ್ಲೆಂಡ್ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಬೆನ್ ಡಕೆಟ್ ಗಳಿಸಿದ ಅಮೋಘ ಶತಕದ (165 ರನ್) ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 351 ರನ್ ಕಲೆಹಾಕಿದೆ. ಆ ಮೂಲಕ, ಆಸಿಸ್‌ಗೆ ಕಠಿಣ ಗುರಿ ನೀಡಿದೆ.
ಟೂರ್ನಿಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದ್ದು, ಶುಭಾರಂಭದ ನಿರೀಕ್ಷೆಯಲ್ಲಿವೆ. ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಮಿತ್ ತಂಡ ಮುನ್ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.