ಪಾಕಿಸ್ತಾನ ತಂಡದ ಆಟಗಾರರು
ರಾಯಿಟರ್ಸ್ ಚಿತ್ರ
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಇಂಜಮಾಮ್–ಉಲ್–ಹಕ್ ಕಳವಳ ವ್ಯಕ್ತಪಡಿಸಿದ್ದಾರೆ. ಸರಿಯಾದ ಯೋಜನೆ ಮತ್ತು ಕಾರ್ಯತಂತ್ರವಿಲ್ಲದಿದ್ದರೆ ಇನ್ನಷ್ಟು ಕುಸಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಲಾಹೋರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಇಂಜಮಾಮ್, ರಾಷ್ಟ್ರೀಯ ತಂಡದ ಪ್ರದರ್ಶನ ಕಳೆದ ಎರಡು ವರ್ಷಗಳಿಂದ ಸತತವಾಗಿ ಕುಸಿಯುತ್ತಿದೆ ಎಂದಿದ್ದಾರೆ.
'ನಾವು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿಲ್ಲ ಮತ್ತು ಹಲವು ವಲಯಗಳಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದೇವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಡದ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥರೂ ಆಗಿರುವ ಅವರು, ಆಟಗಾರರು, ಕೋಚ್‌ಗಳು ಮತ್ತು ಆಡಳಿತ ಮಂಡಳಿಯಲ್ಲಿ ನಿರಂತರವಾಗಿ ಮಾಡಿದ ಬದಲಾವಣೆಗಳೇ ತಂಡದ ವೈಫಲ್ಯಕ್ಕೆ ಕಾರಣ ಎಂದು ಬೊಟ್ಟು ಮಾಡಿದ್ದಾರೆ.
'ಕ್ರಿಕೆಟ್ ಮಂಡಳಿಯು ತಪ್ಪುಗಳಿಂದ ಪಾಠ ಕಲಿಯಬೇಕಿದೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಪ್ರಮಾದಗಳನ್ನು ಪುನಾರವರ್ತಿಸಬಾರದು' ಎಂದು ಸಲಹೆ ನೀಡಿದ್ದಾರೆ.
ತಂಡದ ಆಡಳಿತ ಮಂಡಳಿಯಲ್ಲಿ ನಿರಂತರ ಬದಲಾವಣೆಗಳನ್ನು ಮಾಡುವುದು ಸಮಸ್ಯೆಗಳಿಗೆ ಪರಿಹಾರವಾಗದು ಎಂದಿರುವ ಅವರು, 'ತಪ್ಪುಗಳ ಬಗ್ಗೆ ಅವಲೋಕನ ಮಾಡಬೇಕಿದೆ' ಎಂದಿದ್ದಾರೆ.
'ಎರಡು ವರ್ಷಗಳಿಂದ ತಂಡದ ಪ್ರದರ್ಶನವು ಕುಸಿಯುತ್ತಿದೆ. ಸರಿಯಾದ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗದಿದ್ದರೆ, ಮತ್ತಷ್ಟು ವೈಫಲ್ಯ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.
ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಇಂಜಮಾಮ್, 2023ರ ಅಕ್ಟೋಬರ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ ಹಿತಾಸಕ್ತಿ ಸಂಘರ್ಷ ಆರೋಪ ಕೇಳಿ ಬಂದ ಕಾರಣ, ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ತನಿಖೆಗೆ ಸೂಚಿಸಿತ್ತು. ಹೀಗಾಗಿ, ಇಂಜಮಾಮ್ ಸ್ಥಾನ ತ್ಯಜಿಸಿದ್ದರು.
ಗುಂಪು ಹಂತದಲ್ಲೇ ನಿರ್ಗಮನ
ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಆತಿಥ್ಯ ವಹಿಸಿದ್ದ ಪಾಕಿಸ್ತಾನ, ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಮೂರು ಪಂದ್ಯಗಳ ಪೈಕಿ ನ್ಯೂಜಿಲೆಂಡ್ ಎದುರು 60 ರನ್ ಹಾಗೂ ಭಾರತದ ವಿರುದ್ಧ 6 ವಿಕೆಟ್ ಅಂತರ ಸೋಲು ಕಂಡಿತ್ತು. ಬಾಂಗ್ಲಾ ಎದುರಿನ ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಈ ಟೂರ್ನಿ ಬೆನ್ನಲ್ಲೇ ಟಿ20 ಹಾಗೂ ಏಕದಿನ ಸರಣಿ ಸಲುವಾಗಿ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿರುವ ಪಾಕ್, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ. 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 92 ರನ್‌ಗೆ ಆಲೌಟ್ ಆಗಿ, 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.