ADVERTISEMENT

2013ರಿಂದ ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಎಂಬುದು ಆಟಗಾರರ ತಲೆಯಲ್ಲಿದೆ: ರೋಹಿತ್

ಪಿಟಿಐ
Published 22 ಅಕ್ಟೋಬರ್ 2022, 11:01 IST
Last Updated 22 ಅಕ್ಟೋಬರ್ 2022, 11:01 IST
ಭಾರತ ತಂಡದ ನಾಯಕ ರೋಹಿತ್ ಶರ್ಮಾ
ಭಾರತ ತಂಡದ ನಾಯಕ ರೋಹಿತ್ ಶರ್ಮಾ   

ಮೆಲ್ಬರ್ನ್‌: ನಮ್ಮ ತಂಡ 2013ರಿಂದ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿಲ್ಲ ಎಂಬುದು ಎಲ್ಲ ಆಟಗಾರರ ಮನದಲ್ಲಿ ಇದೆ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌–12 ಹಂತದ ಪಂದ್ಯಗಳು ಇಂದಿನಿಂದ (ಅಕ್ಟೋಬರ್‌ 22) ಆರಂಭವಾಗಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ತಾವಾಡುವ ಮೊದಲ ಪಂದ್ಯದಲ್ಲೇ (ಅಕ್ಟೋಬರ್‌ 22 ರಂದು) ಮುಖಾಮುಖಿಯಾಗಲಿವೆ. ಈ ಪಂದ್ಯದಮುನ್ನಾದಿನ ರೋಹಿತ್‌ ಶರ್ಮಾ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ವಿಶ್ವಕಪ್‌ ಟೂರ್ನಿ ಹಾಗೂ ಪಾಕ್‌ ವಿರುದ್ಧದ ಪಂದ್ಯಗಳಲ್ಲಿನ ಒತ್ತಡದ ಕುರಿತು ಮಾತನಾಡಿರುವ ರೋಹಿತ್, 'ನಾನು ಒತ್ತಡ ಎಂದು ಹೇಳಲು ಬಯಸುವುದಿಲ್ಲ. ಏಕೆಂದರೆ ಅದು ಯಾವಾಗಲೂ ಇರುವಂತದ್ದು. ಅದು ಬದಲಾಗುವುದೇ ಇಲ್ಲ. ಅದರ ಬದಲು ಸವಾಲು ಎಂದು ಹೇಳಲಿಚ್ಛಿಸುತ್ತೇನೆ. ಪಾಕಿಸ್ತಾನ ಅತ್ಯಂತ ಸವಾಲಿನ ತಂಡವಾಗಿದೆ. 2007ರಿಂದ 2022ರ ವರೆಗೆ ಆಡಿರುವ ಪಾಕಿಸ್ತಾನದ ಎಲ್ಲ ತಂಡಗಳೂ ಅತ್ಯುತ್ತಮವಾದವು' ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಭಾರತ ತಂಡವು ಮಹೇಂದ್ರ ಸಿಂಗ್‌ ಧೋನಿ ನೇತೃತ್ವದಲ್ಲಿ2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಅದಾದ ಬಳಿಕಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿಲ್ಲ. ಈ ಬಗ್ಗೆ ಮಾತನಾಡಿರುವ ರೋಹಿತ್‌, 'ನಾವು ಕಳೆದ 9 ವರ್ಷಗಳಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ. ಖಂಡಿತವಾಗಿಯೂ ಇದು ನಮ್ಮ ಆಟಗಾರರ ತಲೆಯಲ್ಲಿದೆ. ಆದರೆ, ಆ ಆಲೋಚನೆಗಳನ್ನೆಲ್ಲ ದೂರವಿರಿಸಿ ಸದ್ಯ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯ ಎಂಬುದರತ್ತ ನೋಡುವುದು ಬಹಳ ಮುಖ್ಯ' ಎಂದಿದ್ದಾರೆ.

'ಆಗಿಹೋಗಿರುವ ವಿಚಾರಗಳ ಬಗ್ಗೆ ಅತಿಯಾಗಿ ಚಿಂತಿಸುವುದರಿಂದ, ಪ್ರಸ್ತುತ ವಿಚಾರಗಳತ್ತ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ. ಸದ್ಯದ ವಿಚಾರಗಳತ್ತ ಚಿತ್ತ ಹರಿಸುವುದು ಮುಖ್ಯ' ಎಂದು ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನ ತಂಡದೊಂದಿಗೆ ಸಾಕಷ್ಟು ಪಂದ್ಯಗಳಲ್ಲಿ ಕಣಕ್ಕಿಳಿಯದಿರುವುದರಿಂದ ಆ ತಂಡದ ಮನಸ್ಥಿತಿ ಹೇಗಿರಲಿದೆ ಎಂಬ ಬಗ್ಗೆ ಖಚಿತವಾಗಿ ತಿಳಿಯುವುದು ಅಸಾಧ್ಯ ಎಂದೂ ರೋಹಿತ್ ಅಭಿಪ್ರಾಯಪಟ್ಟಿದ್ದಾರೆ.

'ಅದೃಷ್ಟವಶಾತ್, ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ ಟೂರ್ನಿಯಲ್ಲಿ ಅವರೊಂದಿಗೆ (ಪಾಕಿಸ್ತಾನ ವಿರುದ್ಧ) ಎರಡು ಬಾರಿ ಆಡಿದ್ದೇವೆ. ಅದನ್ನು ಬಿಟ್ಟು ಬೇರೆ ಪಂದ್ಯಗಳಲ್ಲಿ ಸೆಣಸಾಟ ನಡೆಸಿಲ್ಲ. ಹಾಗಾಗಿ ಅವರು ಯಾವ ಮನಸ್ಥಿತಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಅಂದಾಜಿಸುವುದು ಕಷ್ಟ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.