ವೆಸ್ಟ್ ಇಂಡೀಸ್ ತಂಡ
ಕಿಂಗ್‌ಸ್ಟನ್: ಭಾರತದಂತಹ ಸವಾಲಿನ ಪಿಚ್‌ಗಳಿಗಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 20 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ನಮ್ಮ ಬೌಲರ್‌ಗಳಿಗಿದೆ ಎಂದು ವೆಸ್ಟ್ ಇಂಡೀಸ್ ತಂಡದ ಮುಖ್ಯ ತರಬೇತುದಾರ ಡ್ಯಾರೆನ್ ಸ್ಯಾಮಿ ಹೇಳಿಕೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಅ. 2ರಿಂದ ಭಾರತದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಸ್ಟ್ ಇಂಡೀಸ್ ತಂಡದ ಮುಖ್ಯ ತರಬೇತುದಾರ ಡ್ಯಾರೆನ್ ಸ್ಯಾಮಿ, ನಮ್ಮ ತಂಡದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಕಠಿಣ ದಾಳಿ ಮಾಡಬಲ್ಲ ವೇಗಿಗಳಿದ್ದಾರೆ ಎಂದು ಹೇಳಿದರು.
ವೆಸ್ಟ್ ಇಂಡೀಸ್ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ, ಆಲ್‌ರೌಂಡರ್ ಜಸ್ಟಿನ್ ಗ್ರೀವ್ಸ್ ಜೊತೆಗೆ ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಆಂಡರ್ಸನ್ ಫಿಲಿಪ್ ಮತ್ತು ಜೇಡನ್ ಸೀಲ್ಸ್‌ರಂತಹ ಘಟಾನುಘಟಿ ಬೌಲರ್‌ಗಳಿದ್ದಾರೆ.
ತಮ್ಮ ವೇಗಿಗಳ ಕುರಿತು ಮಾತನಾಡಿದ ಸ್ಯಾಮಿ, ಶಮರ್ ಜೋಸೆಫ್ ಹಾಗೂ ಜೇಡನ್ ಸೀಲ್ಸ್ ಚೆಂಡನ್ನು ಎರಡೂ ಕಡೆಗಳಿಂದ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಜಾರಿ ಜೋಸೆಫ್ ಅವರ ಎತ್ತರ ಉತ್ತಮ ಬೌನ್ಸರ್ ಎಸೆಯಲು ಸಹಕಾರಿಯಾಗಲಿದೆ ಎಂದರು.
ನಾವು ಭಾರತದಂತ ಬಲಿಷ್ಠ ತಂಡದ ವಿರುದ್ಧ ಟೆಸ್ಟ್ ಆಡುವಾಗ ಪಂದ್ಯದಲ್ಲಿ 20 ವಿಕೆಟ್‌ಗಳನ್ನು ಪಡೆಯುವುದು ಮುಖ್ಯ. ನಮ್ಮ ಬೌಲರ್‌ಗಳಿಗೆ ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯವಿದೆ. ಒಂದುವೇಳೆ ಭಾರತದಲ್ಲಿ 20 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ನಾವು ಹಿನ್ನಡೆ ಅನುಭವಿಸುತ್ತೇವೆ ಎಂದರ್ಥ ಎಂದರು.
ಕಳೆದ ವರ್ಷ ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭಾರತದ ತವರು ನೆಲದಲ್ಲಿ 3–0 ಅಂತರದಲ್ಲಿ ಸೋಲಿಸಿರುವುದನ್ನು ನಾವು ಮಾದರಿಯಾಗಿ ತೆಗೆದುಕೊಳ್ಳಬೇಕು. ನಾವು ಕೂಡ ಕಳೆದ 42 ವರ್ಷಗಳಿಂದ ಭಾರತದಲ್ಲಿ ಸರಣಿ ಗೆಲ್ಲಲು ಎದುರು ನೋಡುತ್ತಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.