ADVERTISEMENT

ಗಿಲ್ ಆಟ ವಿರಾಟ್– ರೋಹಿತ್, ಧೋನಿಯ ಅದ್ಭುತ ಪ್ರದರ್ಶನವನ್ನು ನೆನಪಿಸುತ್ತೆ: ಸುರೇಶ್ ರೈನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2023, 10:38 IST
Last Updated 28 ಮೇ 2023, 10:38 IST
ಸುರೇಶ್ ರೈನಾ ಮತ್ತು ಶುಭಮನ್ ಗಿಲ್
ಸುರೇಶ್ ರೈನಾ ಮತ್ತು ಶುಭಮನ್ ಗಿಲ್   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್‌ ತಂಡದ ಯುವತಾರೆ ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂ.ಎಸ್. ಧೋನಿಯವರಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಆಟವಾಡುವಾಗ ದೇಹ ಭಾಷೆ ಅತ್ಯಂತ ಮುಖ್ಯವಾಗಿರುತ್ತದೆ. ಗಿಲ್‌ ಅವರಲ್ಲಿ ಶಾಂತತೆಯನ್ನು ನೋಡಿದ್ದೇನೆ. ಗಿಲ್ ಅವರ ದೇಹ ಭಾಷೆ, ಆತ್ಮವಿಶ್ವಾಸವು ನನಗೆ ಇಷ್ಟವಾಗುತ್ತದೆ. ಹೆಚ್ಚು ಅಭ್ಯಾಸ ಮಾಡುವ ಮೂಲಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ.ಎಸ್‌.ಧೋನಿ, ಜೋಸ್ ಬಟ್ಲರ್ ಅವರಂತೆ ದೊಡ್ಡ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ’ ಎಂದು ರೈನಾ ಕೊಂಡಾಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಹದಿನಾರನೇ ಆವೃತ್ತಿಯ ಐಪಿಎಲ್ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ADVERTISEMENT

ಹೋದ ವಾರವಷ್ಟೇ ಚೆನ್ನೈನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಧೋನಿ ಬಳಗವು ಅಮೋಘ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಗುಜರಾತ್ ತಂಡವು ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ಬಳಗವನ್ನು ಮಣಿಸಿ ಈ ಹಂತಕ್ಕೆ ಬಂದಿದೆ.

58 ದಿನಗಳ ಹಿಂದೆ ಇದೇ ಅಂಗಳದಲ್ಲಿ ಉದ್ಘಾಟನೆಗೊಂಡಿದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ ಧೋನಿ ಬಳಗವು ಆತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿತ್ತು. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಧೋನಿಯ ಅನುಭವ ಹಾಗೂ ಯುವ ನಾಯಕ ಹಾರ್ದಿಕ್ ಪಾಂಡ್ಯ ಅವರ ಛಲದ ಆಟವು ರಂಗೇರುವ ನಿರೀಕ್ಷೆ ಇದೆ.

ಕಳೆದ ಒಂದೂವರೆ ತಿಂಗಳಿನಲ್ಲಿ ಉಭಯ ತಂಡಗಳು ಹಲವು ಏರಿಳಿತಗಳನ್ನು ಕಂಡು ಅಂತಿಮ ಸುತ್ತಿಗೆ ಬಂದು ತಲುಪಿವೆ. ಧೋನಿ ಬಳಗವು ಐದನೇ ಬಾರಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದೆ. ಅದೇ ಗುಜರಾತ್ ತಂಡವು ಸತತ ಎರಡನೇ ಸಲ ಟ್ರೋಫಿ ತನ್ನದಾಗಿಸಿಕೊಳ್ಳುವ ಛಲದಲ್ಲಿದೆ.

ಟೂರ್ನಿಯುದ್ದಕ್ಕೂ ಚೆಂದದ ಬ್ಯಾಟಿಂಗ್ ಮಾಡಿ ಮೂರು ಶತಕಗಳನ್ನು ಗಳಿಸಿರುವ ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಹಾಗೂ ಚೆನ್ನೈ ಬ್ಯಾಟಿಂಗ್‌ನ ಬೆನ್ನೆಲುಬಾಗಿರುವ ಡೆವೊನ್ ಕಾನ್ವೆ ಅವರ ನಡುವಿನ ಹಣಾಹಣಿಯಾಗಿಯೂ ಈ ಪಂದ್ಯ ಗಮನ ಸೆಳೆಯುತ್ತಿದೆ.

ಚೆನ್ನೈನ ಋತುರಾಜ್ ಗಾಯಕವಾಡ, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಕೂಡ ಅಮೋಘ ಲಯದಲ್ಲಿದ್ದಾರೆ. ಅವರಿಗೆ ಪೈಪೋಟಿಯೊಡ್ಡಲು ಟೈಟನ್ಸ್ ತಂಡದ ವೃದ್ಧಿಮಾನ್ ಸಹಾ, ವಿಜಯ್ ಶಂಕರ್ ಇದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ ಮೊಹಮ್ಮದ್ ಶಮಿ ಹಾಗೂ ಸ್ಪಿನ್ನರ್ ರಶೀದ್ ಖಾನ್ ಅವರ ಬಲ ತಂಡಕ್ಕೆ ಇದೆ.

ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಅಪಾರ ವೈಫಲ್ಯ ಅನುಭವಿಸಿದ್ದ ಯುವ ಬೌಲರ್‌ಗಳನ್ನು ಪಳಗಿಸುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ. ಅದರಿಂದಾಗಿ ಮಥೀಷ ಪಥಿರಾಣ, ಮಹೀಷ್ ತೀಕ್ಷಣ ಪಂದ್ಯ ಗೆದ್ದುಕೊಡಬಲ್ಲ ಮಟ್ಟಕ್ಕೆ ಬೆಳೆದಿದ್ದಾರೆ. ಅಲ್ಲದೇ ದೀಪಕ್ ಚಾಹರ್, ಮೊಯಿನ್ ಅಲಿ ಮತ್ತು ರವೀಂದ್ರ ಜಡೇಜ ತಮ್ಮ ಆಲ್‌ರೌಂಡ್ ಆಟದ ಮೂಲಕ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ. ಹೋದ ವರ್ಷದ ಟೂರ್ನಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಲೂ ವಿಫಲವಾಗಿದ್ದ ಚೆನ್ನೈ ತಂಡ ಈ ಬಾರಿ ಪ್ರಶಸ್ತಿ ಸನಿಹ ಬಂದು ನಿಂತಿದೆ. 2021ರಲ್ಲಿ ತಂಡವು ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.