ಶೆಫಾಲಿ ವರ್ಮಾ ಬ್ಯಾಟಿಂಗ್ ವೈಖರಿ
ರಾಯಿಟರ್ಸ್ ಚಿತ್ರ
ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತು. ಹೀಗಾಗಿ, ಮೊದಲೆರಡೂ ಪಂದ್ಯಗಳಲ್ಲಿ ಗೆದ್ದಿದ್ದ ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಹಿನ್ನಡೆಯಾಯಿತು.
ಕೆನ್ನಿಂಗ್ಟನ್ ಓವಲ್ ಕ್ರಿಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 172 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಯಿತು. 5 ರನ್ ಅಂತರದಿಂದ ಗೆದ್ದ ಆತಿಥೇಯ ಪಡೆ, ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಜಯದ ಸವಿಯುಂಡಿತು.
ಆರಂಭಿಕರ ಅರ್ಧಶತಕ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ ಆರಂಭಿಕ ಬ್ಯಾಟರ್‌ಗಳು ಉತ್ತಮ ಬುನಾದಿ ಹಾಕಿಕೊಟ್ಟರು. ಇನಿಂಗ್ಸ್ ಆರಂಭಿಸಿದ ಸೋಫಿಯಾ ಡಂಕ್ಲೇ (75 ರನ್) ಹಾಗೂ ವ್ಯಾಟ್ ಹಾಜ್ (66 ರನ್), ತಲಾ ಅರ್ಧಶತಗಳನ್ನು ಗಳಿಸುವ ಮೂಲಕ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 15.2 ಓವರ್‌ಗಳಲ್ಲಿ 137 ರನ್ ಸೇರಿಸಿದರು.
ಆದರೆ, ಡಂಕ್ಲೇ ಔಟಾದ ನಂತರ ಆತೀಥೇಯರ ಪೆವಿಲಿಯನ್ ಪರೇಡ್ ಆರಂಭವಾಯಿತು. ಕೇವಲ 31 ರನ್ ಅಂತರದಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ, ಬೃಹತ್ ಮೊತ್ತ ಕಲೆಹಾಕುವ ಅವಕಾಶ ಕೈಚೆಲ್ಲಿತು. ಅರುಂಧತಿ ರೆಡ್ಡಿ ಹಾಗೂ ದೀಪ್ತಿ ಶರ್ಮಾ ತಲಾ ಮೂರು ವಿಕೆಟ್ ಪಡೆದರು. ಶ್ರೀಚರಣಿ ಎರಡು ಹಾಗೂ ರಾಧಾ ಯಾದವ್ ಒಂದು ವಿಕೆಟ್ ಕಿತ್ತರು.
ಗುರಿ ಮುಟ್ಟದ ಭಾರತ
ಸವಾಲಿನ ಗುರಿ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 9 ಓವರ್‌ಗಳಲ್ಲೇ 85 ರನ್ ಸೇರಿಸಿತು.
ಒಂದೆಡೆ ಶೆಫಾಲಿ ಬೀಸಾಟವಾಡಿದರೆ, ಮಂದಾನ ರಕ್ಷಣಾತ್ಮಕ ಆಟದ ಮೊರೆ ಹೋದರು. ಕೇವಲ 25 ಎಸೆತಗಳನ್ನು ಎದುರಿಸಿ 47 ರನ್ ಗಳಿಸಿದ್ದ ಶೇಫಾಲಿ ಮೊದಲ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡ ನಂತರ, ಉಳಿದವರು ತಂಡವನ್ನು ಜಯದತ್ತ ಮುನ್ನಡೆಸಲಿಲ್ಲ. ಬಿರುಸಾಗಿ ರನ್ ಗಳಿಸಲು ವಿಫಲವಾದ ಮಂದಾನ 49 ಎಸೆತಗಳಲ್ಲಿ 56 ರನ್ ಗಳಿಸಿ ಔಟಾದರು. ಜೆಮಿಮಾ ರಾಡ್ರಿಗಸ್ (20 ರನ್) ಹಾಗೂ ರಿಚಾ ಘೋಷ್ (7 ರನ್) ಹೆಚ್ಚು ರನ್ ಗಳಿಸಲಿಲ್ಲ.
ಕೊನೇ ಓವರ್‌ನಲ್ಲಿ ಗೆಲ್ಲಲು 12 ರನ್ ಬೇಕಿತ್ತು. ನಾಯಕಿ ಹರ್ಮನ್‌ಪ್ರಿತ್ ಕೌರ್ (23 ರನ್) ಹಾಗೂ ಅಮನ್‌ಜೋತ್ ಕೌರ್ ಕ್ರೀಸ್‌ನಲ್ಲಿದ್ದರು. ಈ ಓವರ್‌ನಲ್ಲಿ 5 ಎಸೆತಗಳನ್ನು ಎದುರಿಸಿದ ಹರ್ಮನ್ 5 ರನ್ ಮಾತ್ರ ಗಳಿಸಿ ಕೊನೇ ಎಸೆತದಲ್ಲಿ ಔಟಾದರು. ಹೀಗಾಗಿ, ಸೋಲು ಅನುಭವಿಸಬೇಕಾಯಿತು.
ಈ ಗೆಲುವಿನೊಂದಿಗೆ ಆತಿಥೇಯ ತಂಡ ಸರಣಿ ಜಯದ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿತು.
ಸರಣಿಯ ಉಳಿದೆರಡು ಪಂದ್ಯಗಳು ಜುಲೈ 6 ಹಾಗೂ ಜುಲೈ 12ರಂದು ನಡೆಯಲಿವೆ. ಇನ್ನೊಂದು ಪಂದ್ಯದಲ್ಲಿ ಗೆದ್ದರೆ ಸರಣಿಯು ಭಾರತದ ಪಾಲಾಗಲಿದೆ. ಇಂಗ್ಲೆಂಡ್ ಎರಡರಲ್ಲೂ ಜಯಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.