ADVERTISEMENT

ಟಿ20 ವಿಶ್ವಕಪ್: ಹರ್ಮನ್‌ಪ್ರೀತ್ –ರಿಚಾ ಮಿಂಚು, ವಿಂಡೀಸ್ ವಿರುದ್ಧ ಗೆದ್ದ ಭಾರತ

ಪಿಟಿಐ
Published 16 ಫೆಬ್ರುವರಿ 2023, 4:36 IST
Last Updated 16 ಫೆಬ್ರುವರಿ 2023, 4:36 IST
ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಬ್ಯಾಟಿಂಗ್ ವೈಖರಿ
ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಬ್ಯಾಟಿಂಗ್ ವೈಖರಿ    

ಕೇ‍ಪ್‌ಟೌನ್‌: ಯುವ ಆಟಗಾರ್ತಿ ರಿಚಾ ಘೋಷ್‌ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿ ನಿಂದ ಭಾರತ ತಂಡಕ್ಕೆ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಲಭಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌, 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 118 ರನ್‌ ಗಳಿಸಿದರೆ, ಹರ್ಮನ್‌ ಬಳಗ 11 ಎಸೆತಗಳು ಇರುವಂತೆಯೇ ನಾಲ್ಕು ವಿಕೆಟ್‌ ಕಳೆದುಕೊಂಡು ಗೆದ್ದಿತು.

ಅಜೇಯ 44 ರನ್‌ (32 ಎ., 4X5) ಗಳಿಸಿದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಅವರು ಗೆಲುವಿನ ಹಾದಿ ಸುಗಮಗೊಳಿಸಿದರು. ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಭಾರತ ತಂಡ, ಒಟ್ಟು ನಾಲ್ಕು ಪಾಯಿಂಟ್ಸ್‌ ಹೊಂದಿದೆ. ರಿಚಾ ಅವರು ಪಾಕ್‌ ಎದುರಿನ ಪಂದ್ಯದಲ್ಲೂ ಬಿರುಸಿನ ಆಟದಿಂದ ಗಮನ ಸೆಳೆದಿದ್ದರು.

ADVERTISEMENT

ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಶಫಾಲಿ ವರ್ಮ (28 ರನ್, 23 ಎ., 4X5) ಮತ್ತು ಸ್ಮೃತಿ ಮಂದಾನ (10) ಮೊದಲ ವಿಕೆಟ್‌ಗೆ 32 ರನ್‌ ಸೇರಿಸಿದರು. ಇವರಿಬ್ಬರು ಮತ್ತು ಜೆಮಿಮಾ ರಾಡ್ರಿಗಸ್‌ (1) ಅಲ್ಪ ಅಂತರದಲ್ಲಿ ಔಟಾದರು.

ಈ ವೇಳೆ ಜತೆಯಾದ ರಿಚಾ ಮತ್ತು ಹರ್ಮನ್‌ ಅವರು ನಾಲ್ಕನೇ ವಿಕೆಟ್‌ಗೆ 72 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮಿಂಚಿದ ದೀಪ್ತಿ: ಮೊದಲು ಬ್ಯಾಟ್‌ ಮಾಡಿದ್ದ ವಿಂಡೀಸ್‌ ತಂಡವನ್ನು ದೀಪ್ತಿ ಶರ್ಮಾ (15ಕ್ಕೆ 3) ಅವರ ಶಿಸ್ತಿನ ಬೌಲಿಂಗ್‌ ನೆರವಿನಿಂದ ಭಾರತ ತಂಡ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ರೇಣುಕಾ ಸಿಂಗ್‌ ಮತ್ತು ಪೂಜಾ ವಸ್ತ್ರ ಕರ್‌ ಅವರೂ ಬಿಗುವಾದ ದಾಳಿ ನಡೆಸಿದರು.

ವಿಂಡೀಸ್‌ ತಂಡ ಹೇಯ್ಲಿ ಮ್ಯಾಥ್ಯೂಸ್‌ (2) ಅವರನ್ನು ಬೇಗನೇ ಕಳೆದುಕೊಂಡಿತು. ಸ್ಟೆಫಾನಿ ಟೇಲರ್‌ (42 ರನ್‌,40 ಎ., 4X6) ಮತ್ತು ಶೆಮೈನ್‌ ಕ್ಯಾಂಪ್‌ಬೆಲ್ (30 ರನ್‌, 36 ಎ., 4X3) ಎರಡನೇ ವಿಕೆಟ್‌ಗೆ 73 ರನ್‌ ಸೇರಿಸಿ ಆಸರೆಯಾದರು. ಆದರೆ ಒಂದು ರನ್‌ ಅಂತರದಲ್ಲಿ ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿದ ದೀಪ್ತಿ, ಭಾರತಕ್ಕೆ ಮೇಲುಗೈ ತಂದಿತ್ತರು.

ಕೊನೆಯ ಓವರ್‌ಗಳಲ್ಲಿ ರನ್‌ ವೇಗ ಹೆಚ್ಚಿಸಲು ವಿಂಡೀಸ್‌ ಬ್ಯಾಟರ್‌ಗಳಿಗೆ ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 118 (ಸ್ಟೆಫಾನಿ ಟೇಲರ್‌ 42, ಶೆಮೈನ್‌ ಕ್ಯಾಂಪ್‌ಬೆಲ್ 30, ಚೆಡೀನ್‌ ನೇಷನ್‌ ಔಟಾಗದೆ 21, ದೀಪ್ತಿ ಶರ್ಮಾ 15ಕ್ಕೆ 3, ಪೂಜಾ ವಸ್ತ್ರಕರ್‌ 21ಕ್ಕೆ 1, ರೇಣುಕಾ ಸಿಂಗ್‌ 22ಕ್ಕೆ 1)

ಭಾರತ 18.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 119 (ಶಫಾಲಿ ವರ್ಮ 28, ಸ್ಮೃತಿ ಮಂದಾನ 10, ಹರ್ಮನ್‌ಪ್ರೀತ್‌ ಕೌರ್‌ 33, ರಿಚಾ ಘೋಷ್ ಔಟಾಗದೆ 44, ಕರಿಷ್ಮಾ ರಮರಾಕ್ 14ಕ್ಕೆ 2, ಹೇಯ್ಲಿ ಮ್ಯಾಥ್ಯೂಸ್‌ 12ಕ್ಕೆ 1) ಫಲಿತಾಂಶ: ಭಾರತಕ್ಕೆ 6 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.