ADVERTISEMENT

ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಗೆದ್ದ ವನಿತೆಯರಿಗೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2023, 11:23 IST
Last Updated 2 ಫೆಬ್ರುವರಿ 2023, 11:23 IST
ವಿಶ್ವಕಪ್ ಗೆದ್ದ 19 ವರ್ಷದೊಳಗಿನ ಮಹಿಳೆಯರ ತಂಡಕ್ಕೆ ₹5 ಕೋಟಿ ಬಹುಮಾನ ಚೆಕ್ ವಿತರಿಸಲಾಯಿತು. 
ವಿಶ್ವಕಪ್ ಗೆದ್ದ 19 ವರ್ಷದೊಳಗಿನ ಮಹಿಳೆಯರ ತಂಡಕ್ಕೆ ₹5 ಕೋಟಿ ಬಹುಮಾನ ಚೆಕ್ ವಿತರಿಸಲಾಯಿತು.    

ನವದೆಹಲಿ: 19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.

ಜ.29ರಂದು ನಡೆದಿದ್ದ 19 ವರ್ಷದೊಳಗಿನ ಮಹಿಳಾ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಇತಿಹಾಸ ರಚಿಸಿತ್ತು.

ಟೀಮ್ ಇಂಡಿಯಾ ಆಟಗಾರ್ತಿಯರ ಬರುವಿಕೆಗಾಗಿ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಕುಟುಂಬಸ್ಥರು ಮತ್ತು ಅಭಿಮಾನಿಗಳು ತಮ್ಮವರನ್ನು ಕಂಡ ಕೂಡಲೇ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಬಳಿಕ ತಮ್ಮ ಮನೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದಾರೆ.

ADVERTISEMENT

ಇದೇ ಮೊದಲು ಆಯೋಜನೆಗೊಂಡಿದ್ದ ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಯುವಪಡೆಯ ನಾಯಕತ್ವ ವಹಿಸಿದ್ದ 19 ವರ್ಷದ ಶಫಾಲಿ ಇತಿಹಾಸ ಬರೆದಿದ್ದಾರೆ.

ವಿಶ್ವಕಪ್ ಗೆದ್ದ ಮಹಿಳಾ ತಂಡಕ್ಕೆ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಶ್ವಕಪ್ ಗೆದ್ದ 19 ವರ್ಷದೊಳಗಿನ ಮಹಿಳೆಯರ ತಂಡದ ನಾಯಕಿ ಶಫಾಲಿ ವರ್ಮಾ ಅವರಿಗೆ ₹5 ಕೋಟಿ ಬಹುಮಾನ ಚೆಕ್ ವಿತರಿಸಲಾಯಿತು.

ಇದೇ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ (126; 63ಎ) ಅಜೇಯ ಶತಕದ ಬಲದಿಂದ ಭಾರತ ತಂಡವು 168 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ 2–1ರಿಂದ ಸರಣಿಯನ್ನು ಗೆದ್ದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.