
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಅಲಿಸಾ ಹೀಲಿ
ಪಿಟಿಐ ಚಿತ್ರ
ಮುಂಬೈ: ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಗೆಲುವಿಗೆ ಕಾರಣವಾಗಿರುವ ಜೆಮಿಮಾ ರಾಡ್ರಿಗಸ್ ಪ್ರದರ್ಶನದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಆಸೀಸ್ ತಂಡದ ನಾಯಕಿ ಅಲೀಸಾ ಹೀಲಿ, ರೊಡ್ರಿಗಸ್ ‘ಮಾನಸಿಕ ದೃಢತೆ ಅನುಕರಣೀಯ’ ಎಂದು ಶ್ಲಾಘಿಸಿದ್ದಾರೆ.
ಗುರುವಾರ ನಡೆದ ಸೆಮಿಫೈನಲ್ ಪಂದ್ಯದ ಬಳಿಕ ಮಾತನಾಡಿದ ಹೀಲಿ, ‘ನಾವು ಕೊನೆಯ ನಾಲ್ಕು, ಐದು ಓವರ್‌ಗಳ ವರೆಗೂ ಆಟದಲ್ಲಿದ್ದೆವು. ಆದರೆ, ಕೊನೆಯ ಕ್ಷಣದಲ್ಲಿ ಸೋಲು ಅನುಭವಿಸಬೇಕಾಯಿತು. ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಯಶಸ್ವಿಯಾದಾಗ ಪಂದ್ಯ ಗೆಲ್ಲಬಹುದು. ಜೆಮಿಮಾ ನಿಜವಾಗಿ ಅದ್ಭುತವಾಗಿ ಆಡಿದರು’ ಎಂದು ಹೇಳಿದರು.
ಆಸ್ಟ್ರೇಲಿಯಾ ತಂಡದ ಬೌಲಿಂಗ್ ಪ್ರದರ್ಶನದ ಕುರಿತು ವಿಷಾದ ವ್ಯಕ್ತಪಡಿಸಿದರು. ತಂಡದ ಪ್ರದರ್ಶನವನ್ನು ‘ಜಂಕ್‘ ಎಂದು ಕರೆದರು. ಮಾತ್ರವಲ್ಲ, ಮೈದಾನದಲ್ಲಿ ತಪ್ಪುಗಳನ್ನು ಮಾಡುವುದು ತಂಡದ ಲಕ್ಷಣವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ವಿಫಲರಾಗಿದ್ದೇವೆ. ನಾವು ಮೈದಾನದಲ್ಲಿ ಇತರೆ ದಿನಗಳಲ್ಲಿ ಕಾಣಿಸಿಕೊಳ್ಳುವ ಆಸ್ಟ್ರೇಲಿಯಾ ತಂಡದಂತೆ ಇರಲಿಲ್ಲ. ಈ ವಿಶ್ವಕಪ್ ಅನ್ನು ನಾವು ಎಷ್ಟು ಚೆನ್ನಾಗಿ ಆಡಿದ್ದೇವೆ ಎಂದು ಹೇಳಲು ಬಯಸುವುದಿಲ್ಲ. ಆದರೆ ನಿರಾಶೆಯಾಗಿದೆ’ ಎಂದರು.
ಆಸ್ಟ್ರೇಲಿಯಾ ಮೈದಾನದಲ್ಲಿ ಹೆಚ್ಚು ಚುರುಕಾಗಿರಲಿಲ್ಲ. ಜೆಮಿಮಾ ಅವರು 82 ಮತ್ತು 106 ರನ್‌ಗಳಿದ್ದಾಗ ಎರಡು ಬಾರಿ ಕ್ಯಾಚ್ ನೀಡಿದ್ದರು. ಅದನ್ನು ಕೈಚೆಲ್ಲಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು ಎಂದರು.
ಈ ಕುರಿತು ಮಾತನಾಡಿದ ಹೀಲಿ, ‘ನಾವು ಜೆಮಿಮಾ ಅವರಿಗೆ ಒಂದೆರಡು ಅವಕಾಶಗಳನ್ನು ನೀಡಿದ್ದು, ಅತ್ಯಂತ ದುಬಾರಿಯಾಯಿತು. ಆದರೆ, ಅವರು ನಿಜವಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದರು ಎಂದು ನಾನು ಭಾವಿಸುತ್ತೇನೆ. ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಲು ಆಕೆ ಮಾನಸಿಕವಾಗಿ ಸಿದ್ಧಗೊಂಡಿದ್ದಳು. ಇದು ಅನುಕರಣೀಯ‘ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.