
ಟ್ರೋಫಿಯೊಂದಿಗೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್
–ಪಿಟಿಐ ಚಿತ್ರ
ನವಿ ಮುಂಬೈ: ಕಪಿಲ್ ದೇವ್ ನಾಯಕತ್ವದ ಭಾರತ ತಂಡವು 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಅಂತಹದೊದು ಐತಿಹಾಸಿಕ ಸಾಧನೆಯನ್ನು ಮಾಡಲು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ತುದಿಗಾಲಿನಲ್ಲಿ ನಿಂತಿದೆ.
ಭಾನುವಾರ ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಕಿರೀಟ ಧರಿಸುವ ಛಲದಲ್ಲಿ ಭಾರತವಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಆದ್ದರಿಂದ ಲಾರಾ ವೊಲ್ವಾರ್ಟ್ ಬಳಗವೂ ಚಾರಿತ್ರಿಕ ಸಾಧನೆ ಮಾಡುವತ್ತ ಚಿತ್ತ ನೆಟ್ಟಿದೆ. ಅದರಿಂದಾಗಿಯೇ 13ನೇ ವಿಶ್ವಕಪ್ ಫೈನಲ್ ತೀವ್ರ ಕುತೂಹಲ ಕೆರಳಿಸಿದೆ.
ಉಭಯ ತಂಡಗಳೂ ಈ ಟೂರ್ನಿಯಲ್ಲಿ ಕಠಿಣ ಸವಾಲುಗಳನ್ನು ಗೆದ್ದು ಫೈನಲ್ ತಲುಪಿವೆ.
ಒಂದೊಮ್ಮೆ ಕೌರ್ ಬಳಗವು ಇಲ್ಲಿ ಪ್ರಶಸ್ತಿ ಜಯಿಸಿದರೆ, ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ವೇಗ ದೊರೆಯಲಿದೆ. ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ನತ್ತ ವಾಲುವ ಸಾಧ್ಯತೆಗಳು ಹೆಚ್ಚಲಿವೆ. ಮೂರು ವರ್ಷಗಳಿಂದ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗಿಂತಲೂ ವಿಶ್ವಕಪ್ ವಿಜಯವು ಹೆಚ್ಚು ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಆದರೆ ಆತಿಥೇಯ ತಂಡವು ಮೂರು ದಿನಗಳ ಹಿಂದೆ ಸೆಮಿಫೈನಲ್ ಸಾಧಿಸಿದ ಅಮೋಘ ಜಯದ ಭಾವನಾತ್ಮಕ ಸಂಭ್ರಮದ ಗುಂಗಿನಿಂದ ತ್ವರಿತವಾಗಿ ಹೊರಬರಬೇಕಿದೆ. ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರಿನ ಆ ಜಯಕ್ಕೆ ಜೆಮಿಮಾ ರಾಡ್ರಿಗಸ್ (ಅಜೇಯ 127) ಅವರ ಅವಿಸ್ಮರಣೀಯ ಬ್ಯಾಟಿಂಗ್ ಮತ್ತು ನಾಯಕಿ ಕೌರ್ ಅವರ 89 ರನ್‌ಗಳ ಆಟವು ಜಯಕ್ಕೆ ಕಾರಣವಾಗಿದ್ದವು.
ಭಾರತ ಮಹಿಳಾ ತಂಡವು 2005ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿತ್ತು. 2017ರ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋತಾಗ ತಂಡದಲ್ಲಿ ಹರ್ಮನ್‌ಪ್ರೀತ್ ಕೂಡ ಇದ್ದರು.
ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ವೈಫಲ್ಯ ಅನುಭವಿಸಿದ್ದರು. ಈ ಟೂರ್ನಿಯಲ್ಲಿ ಸ್ಮೃತಿ 385 ರನ್ ಗಳಿಸಿದ್ದಾರೆ. ಸೆಮಿಫೈನಲ್‌ನಲ್ಲಿಯೂ ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷಿತವಾಗಿತ್ತು. ಫೈನಲ್‌ನಲ್ಲಿಯೂ ಅವರ ಮೇಲೆ ಹೆಚ್ಚಿನ ಹೊಣೆ ಇದೆ. ಏಕೆಂದರೆ; ಗಾಯಗೊಂಡಿರುವ ಪ್ರತೀಕಾ ರಾವಲ್ ಬದಲಿಗೆ ಸ್ಥಾನ ಪಡೆದಿರುವ ಶಫಾಲಿ ವರ್ಮಾ ಲಯದಲ್ಲಿ ಇಲ್ಲ. ಕೌರ್, ರಿಚಾ ಘೋಷ್, ಆಲ್‌ರೌಂಡರ್ ದೀಪ್ತಿ, ಸ್ನೇಹರಾಣಾ ಹಾಗೂ ಅಮನ್ಜೋತ್ ಕೌರ್ ಅವರು ಮಧ್ಯಮಕ್ರಮಾಂಕದ ಶಕ್ತಿಯಾಗಿದ್ದಾರೆ.
ದೀಪ್ತಿ ಟೂರ್ನಿಯಲ್ಲಿ 17 ವಿಕೆಟ್ ಉರುಳಿಸಿದ್ದು, ಬೌಲಿಂಗ್ ವಿಭಾಗದಲ್ಲಿ ಅವರ ಮೇಲೆ ಹೆಚ್ಚು ನಿರೀಕ್ಷೆ ಇದೆ.
ದಕ್ಷಿಣ ಆಫ್ರಿಕಾದ ಮರೈಝಾನ್ ಕಾಪ್ (204 ರನ್), ನದಿನ್ ಡಿ ಕ್ಲರ್ಕ್ (190), ತಾಜ್ಮೀನ್ ಬ್ರಿಟ್ಸ್ (212) ಮತ್ತು ಲಾರಾ ವೊಲ್ವಾರ್ಟ್ (470) ಅವರನ್ನು ನಿಯಂತ್ರಿಸುವುದೇ ಭಾರತದ ಬೌಲರ್‌ಗಳ ಮುಂದಿರುವ ಕಠಿಣ ಸವಾಲು. ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಸುಲಭವಾಗಿ ಸೋಲಿಸಿತ್ತು.
ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು ರನ್‌ಗಳ ಹೊಳೆ ಹರಿಯುವ ಎಲ್ಲ ಸಾಧ್ಯತೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಬಲಶಾಲಿಗಳ ನಡುವಣ ಈ ಹಣಾಹಣಿಯಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬಲ್ಲ ತಂಡವು ‘ಮೊದಲ ಕಿರೀಟ’ ಧರಿಸುವುದು ಖಚಿತ.
ಇತ್ತಂಡಗಳು ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿಮಂದಾನ (ಉಪನಾಯಕಿ) ರಿಚಾ ಘೋಷ್ (ವಿಕೆಟ್‌ಕೀಪರ್) ಉಮಾ ಚೆಟ್ರಿ (ವಿಕೆಟ್‌ಕೀಪರ್) ಜೆಮಿಮಾ ರಾಡ್ರಿಗಸ್ ಹರ್ಲೀನ್ ಡಿಯೊಲ್ ಶಫಾಲಿ ವರ್ಮಾ ಅಮನ್ಜೋತ್ ಕೌರ್ ದೀಪ್ತಿ ಶರ್ಮಾ ಸ್ನೇಹ ರಾಣಾ ಕ್ರಾಂತಿ ಗೌಡ್ ರೇಣುಕಾಸಿಂಗ್ ಠಾಕೂರ್ ಶ್ರೀಚರಣಿ ಅರುಂಧತಿ ರೆಡ್ಡಿ ರಾಧಾ ಯಾದವ್.
ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಟ್ (ನಾಯಕಿ) ತಾಜ್ಮೀನ್ ಬ್ರಿಟ್ಸ್ ಸಿನಾಲೊ ಝಾಪ್ತಾ (ವಿಕೆಟ್‌ಕೀಪರ್) ಕರೇಬೊ ಮೆಸೊ (ವಿಕೆಟ್‌ಕೀಪರ್) ಅನಿಕೆ ಬಾಷ್ ನದೀನ್ ಡಿ ಕ್ಲರ್ಕ್ ಅನೇರಿ ಡರ್ಕಸನ್ ಮರೈಝಾನ್ ಕಾಪ್ ಸುನಿ ಲೂಸ್ ನೊಂದುಮಿಸೊ ಶಾಂಗೇಸ್ ಚೋಲೆ ಟ್ರೈಯನ್ ಅಯಾಬೊಂಗಾ ಕಾಕಾ ಮಸಾಬತಾ ಕ್ಲಾಸ್ ನಾನ್‌ಕುಲುಲೆಕೊ ಮ್ಲಾಬಾ ತಮಿ ಸೆಕುಖುನೆ.
ಪಂದ್ಯ ಆರಂಭ: ಮಧ್ಯಾಹ್ನ 3 ನೇರಪ್ರಸಾರ:
ಭಾರತ ತಂಡದ ಬ್ಯಾಟರ್ ಜೆಮಿಮಾ ರಾಡ್ರಿಗಸ್ ತಾಲೀಮು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.