ADVERTISEMENT

ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್; ಫೈನಲ್‌ನತ್ತ ಭಾರತ..!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2021, 16:49 IST
Last Updated 25 ಫೆಬ್ರುವರಿ 2021, 16:49 IST
ಟೀಮ್ ಇಂಡಿಯಾ
ಟೀಮ್ ಇಂಡಿಯಾ   

ಅಹಮದಾಬಾದ್: ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೇ ಮೊದಲ ಬಾರಿಗೆ ಆಯೋಜಿಸುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್ ಮತ್ತಷ್ಟು ರೋಚಕ ಹಂತವನ್ನು ತಲುಪಿದೆ.

ಅಹಮದಾಬಾದ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ.

ಅಲ್ಲದೆ ಫೈನಲ್‌ಗೆ ಪ್ರವೇಶಿಸಲು ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನಿಷ್ಠ ಡ್ರಾ ಫಲಿತಾಂಶವನ್ನು ದಾಖಲಿಸಬೇಕಿದೆ.

ಇಂಗ್ಲೆಂಡ್ ಕನಸು ಭಗ್ನ...
ಈ ನಡುವೆ ಭಾರತ ವಿರುದ್ಧ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿರುವ ಇಂಗ್ಲೆಂಡ್ ಕನಸು ಭಗ್ನಗೊಂಡಿದೆ. ಅಲ್ಲದೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತವಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 71ರಷ್ಟು ಶೇಕಡಾವಾರು ಅಂಕಗಳನ್ನು ಕಲೆ ಹಾಕಿರುವ ಭಾರತ, ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಹಾಗೊಂದು ವೇಳೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದರೆ ಭಾರತದ ಫೈನಲ್ ಕನಸು ಕೂಡಾ ಭಗ್ನವಾಗಲಿದೆ. ಹಾಗಾದ್ದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶಿಸಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಸರಣಿಗೂ ಮುನ್ನವೇ ನ್ಯೂಜಿಲೆಂಡ್ ಫೈನಲ್ ಜಾಗವನ್ನು ಖಚಿತಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.