
ಭಾರತ ಕ್ರಿಕೆಟ್ ತಂಡದ ಆಟಗಾರರು
ಕೃಪೆ: ಪಿಟಿಐ
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ 2 ಪಂದ್ಯಗಳ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ.
ಕೋಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್ ಅನ್ನು 30 ರನ್ ಅಂತರದಿಂದ ಸೋತಿದ್ದ ಭಾರತ, 2ನೇ ಪಂದ್ಯವನ್ನು 408 ರನ್‌ಗಳಿಂದ ಕಳೆದುಕೊಂಡಿದೆ. ಇದು, ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ, ಭಾರತ ತಂಡಕ್ಕೆ ರನ್ ಅಂತರದಲ್ಲಿ ಎದುರಾದ ಅತಿದೊಡ್ಡ ಸೋಲಾಗಿದೆ.
ಇದೇ ವರ್ಷಾರಂಭದಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಡ್ರಾ ಸಾಧಿಸಿದ್ದ ಭಾರತ, ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಕೆಳಗಿನ ಸ್ಥಾನಕ್ಕೆ ಜಾರಿದೆ.
ಪ್ರಸ್ತುತ ಡಬ್ಲ್ಯುಟಿಸಿ ಆವೃತ್ತಿಯಲ್ಲಿ (2025-2027) ಇದುವರೆಗೆ ಒಟ್ಟು 9 ಪಂದ್ಯಗಳನ್ನು ಆಡಿರುವ ಭಾರತ, ತಲಾ ನಾಲ್ಕರಲ್ಲಿ ಜಯ ಹಾಗೂ ಸೋಲು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಶುಭಮನ್ ಗಿಲ್ ಪಡೆಯ ಜಯದ ಸರಾಸರಿ, ಶೇ 48.15ಕ್ಕೆ ಕುಸಿದಿದೆ.
ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದಿರುವ ಆಸ್ಟ್ರೇಲಿಯಾ, ಶೇ 100ರಷ್ಟು ಜಯದ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಆಡಿರುವ ನಾಲ್ಕರ ಪೈಕಿ ಮೂರರಲ್ಲಿ ಗೆದ್ದು, ಒಂದನ್ನು ಸೋತಿರುವ ದಕ್ಷಿಣ ಆಫ್ರಿಕಾ ಶೇ 75ರ ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ ಶ್ರೀಲಂಕಾ (ಶೇ 66.67) ಮತ್ತು ಪಾಕಿಸ್ತಾನ (ಶೇ 50) ಇವೆ. ಶ್ರೀಲಂಕಾ ತಂಡ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಜಯ ಸಾಧಿಸಿ, ಮತ್ತೊಂದನ್ನು ಡ್ರಾ ಮಾಡಿಕೊಂಡಿದೆ. ಪಾಕ್ ಪಡೆ, ಆಡಿರುವ ಎರಡು ಪಂದ್ಯಗಳ ಪೈಕಿ ತಲಾ ಒಂದೊಂದು ಜಯ ಹಾಗೂ ಸೋಲು ಅನುಭವಿಸಿದೆ.
ಮೊದಲ ಆವೃತ್ತಿಯಲ್ಲಿ (2019-2021) ಚಾಂಪಿಯನ್ ಪಟ್ಟಕ್ಕೇರಿದ್ದ ನ್ಯೂಜಿಲೆಂಡ್, ಸದ್ಯದ ಆವೃತ್ತಿಯಲ್ಲಿ ಇನ್ನೂ ಒಂದೂ ಸರಣಿಯಲ್ಲಿ ಆಡಿಲ್ಲ.
ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು, 2027ರಲ್ಲಿ ನಡೆಯುವ ಫೈನಲ್‌ಗೆ ಅರ್ಹತೆ ಗಿಟ್ಟಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.