ಡೆಲ್ಲಿ ಕ್ಯಾಪಿಟಲ್ಸ್ ತಂಡ
ಕೃಪೆ: @DelhiCapitals
ವಡೋದರ: ಮರೈಝನ್ ಕಾಪ್ ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ಲಾರಾ ವೋಲ್ವಾರ್ಟ್ ಅವರ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಭಾನುವಾರ ಯು.ಪಿ. ವಾರಿಯರ್ಸ್ ತಂಡವನ್ನು ಮಣಿಸಿ, ಎಲಿಮಿನೇಟರ್ ಪ್ರವೇಶಿಸಿತು.
ಇಲ್ಲಿನ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ಜೆಮಿಮಾ ರಾಡ್ರಿಗಸ್ ಫೀಲ್ಡಿಂಗ್ ಆಯ್ದುಕೊಂಡರು. ಮರಿಝಾನ್ ಕಾಪ್ (30ಕ್ಕೆ 3), ಶಿನೆಲ್ ಹೆನ್ರಿ (25ಕ್ಕೆ 2) ಮತ್ತು ಶ್ರೀಚರಣಿ (22ಕ್ಕೆ 2) ಅವರು ನಾಯಕಿಯ ನಿರ್ಧಾರವನ್ನು ಸಮರ್ಥಿಸುವಂತೆ ಬಿಗುವಿನ ಬೌಲಿಂಗ್ ದಾಳಿ ನಡೆಸಿದರು.
ನಿರಂತರವಾಗಿ ವಿಕೆಟ್ ಕಳೆದುಕೊಂಡ ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ್ತಿ ದೀಪ್ತಿ ಶರ್ಮಾ (24), ಮಧ್ಯಮ ಕ್ರಮಾಂಕದ ಸಿಮ್ರನ್ ಶೇಕ್ (22) ಹಾಗೂ ಕೆಳಕ್ರಮಾಂಕದ ಆಟಗಾರ್ತಿ ಶಿಖಾ ಪಾಂಡೆ (ಔಟಾಗದೇ 23) ಕೊಂಚ ಹೋರಾಟ ತೋರಿದರು.
94 ರನ್‌ಗಳಿಗೆ 8 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಸೋಫಿ ಎಕ್ಲೆಸ್ಟೋನ್ (ಔಟಾಗದೇ 10) ಮತ್ತು ಶಿಖಾ ಅವರು ನೂರರ ಗಡಿ ದಾಟಿಸಿದರು. ಅವರು ಮುರಿಯದ ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 28 ರನ್ ಪೇರಿಸಿದರು.
ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ವೋಲ್ವಾರ್ಟ್ (47; 36ಎ, 4x5) ಹಾಗೂ ಶಫಾಲಿ ವರ್ಮಾ (25; 28ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 73 ರನ್ ಸೇರಿಸಿದರು. ಬಳಿಕ, ನಾಯಕಿ ಜೆಮಿಮಾ (ಔಟಾಗದೇ 34; 18 ಎ; 4x5) ಬಿರುಸಿನ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಸುಲಭವಾಗಿ ದಡ ತಲುಪಿಸಿ ದರು. ಅದರೊಂದಿಗೆ, ಎಲಿಮಿನೇಟರ್ ಗೇರುವ ಮುಂಬೈ ಇಂಡಿಯನ್ಸ್ ತಂಡದ ಕನಸು ಭಗ್ನಗೊಂಡಿತು.
ಡೆಲ್ಲಿ ತಂಡವು ಮಂಗಳವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದೊಂದಿಗೆ ಹಣಾಹಣಿ ನಡೆಸಲಿದೆ. ವಿಜೇತ ತಂಡವು ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು
ಯು.ಪಿ ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 (ದೀಪ್ತಿ ಶರ್ಮಾ 24, ಶಿಖಾ ಪಾಂಡೆ ಔಟಾಗದೇ 23; ಶಿನೆಲ್ ಹೆನ್ರಿ 25ಕ್ಕೆ2, ಮರೈಝನ್ ಕಾಪ್ 30ಕ್ಕೆ 3, ಶ್ರೀಚರಣಿ 22ಕ್ಕೆ 2).
ಡೆಲ್ಲಿ ಕ್ಯಾಪಿಟಲ್ಸ್: 18.4 ಓವರ್‌ಗಳಲ್ಲಿ5 ವಿಕೆಟ್‌ಗೆ 126 (ಲಾರಾ ವೋಲ್ವಾರ್ಟ್ 47, ಔಟಾಗದೇ 34; ದೀಪ್ತಿ ಶರ್ಮಾ 27ಕ್ಕೆ2).
ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 5 ವಿಕೆಟ್ ಜಯ.
ಪಂದ್ಯದ ಆಟಗಾರ್ತಿ: ಮರೈಝನ್ ಕಾಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.