
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರಿತ್ ಕೌರ್
ಕೃಪೆ: ಪಿಟಿಐ
ವಡೋದರ: ಒಂದರ ಮೇಲೊಂದರಂತೆ ಪಂದ್ಯ ಗೆದ್ದು ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತಡೆದು ಡಬ್ಲ್ಯುಪಿಎಲ್‌ನಲ್ಲಿ ತನ್ನ ಪ್ಲೇಆಫ್ ಅವಕಾಶ ಜೀವಂತವಾಗಿಸಬೇಕಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ರಬಲ ಆಲ್‌ರೌಂಡ್ ಆಟ ಪ್ರದರ್ಶಿಸಬೇಕಾದ ಅಗತ್ಯವಿದೆ. ಇವೆರಡು ತಂಡಗಳು ಶನಿವಾರ ಕೋತಂಬಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಈ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಏಳು ವಿಕೆಟ್‌ಗಳ ಗೆಲುವಿನೊಡನೆ ಕ್ಯಾಪಿಟಲ್ಸ್ ತಂಡವು ಆತ್ಮವಿಶ್ವಾಸದ ಮಟ್ಟ ಎತ್ತರಿಸಿಕೊಂಡಿದೆ. ಜೆಮಿಮಾ ರಾಡ್ರಿಗಸ್ ಸಾರಥ್ಯದ ಡೆಲ್ಲಿ ತಂಡ ಐದು ತಂಡಗಳ ಲೀಗ್‌ನಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದೆ. ಸ್ಮೃತಿ ಮಂದಾನ ಬಳಗ 5 ಪಂದ್ಯಗಳಿಂದ 10 ಪಾಯಿಂಟ್ ಪಡೆದು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಇನ್ನೊಂದು ಪಂದ್ಯ ಗೆದ್ದರೆ ನೇರವಾಗಿ ಫೈನಲ್‌ಗೆ ಲಗ್ಗೆಯಿಡಬಹುದು.
ಆದರೆ, ಈ ಆವೃತ್ತಿಯಲ್ಲಿ ಅಜೇಯವಾಗುಳಿದಿರುವ ಆರ್‌ಸಿಬಿ ತಂಡವನ್ನು ಮಣಿಸಬೇಕಾದರೆ ಡೆಲ್ಲಿ ತಂಡ ತನ್ನ ಆಟವನ್ನು ಸಾಕಷ್ಟು ಸುಧಾರಿಸಿಕೊಳ್ಳಬೇಕಾಗಿದೆ. ಡೆಲ್ಲಿ ಪರ ಈ ಋತುವಿನಲ್ಲಿ ಲಿಝೆಲ್ ಲೀ (213 ರನ್) ಉತ್ತಮವಾಗಿ ಆಡಿದ್ದಾರೆ. ಅವರಿಗೆ ಲಾರಾ ವೋಲ್ವಾರ್ಟ್ (123) ಮತ್ತು ಶಫಾಲಿ ವರ್ಮಾ (149) ಅವರಿಂದ ಸ್ವಲ್ಪ ಬೆಂಬಲ ದೊರೆತಿದೆ.
ಆದರೆ ನಾಯಕಿ ಜೆಮಿಮಾ ರಾಡ್ರಿಗಸ್ ಒಳ್ಳೆಯ ಲಯದಲ್ಲಿ ಇಲ್ಲದಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಮುಂಬೈ ವಿರುದ್ಧ ಗೆಲುವು ಕಂಡ ಪಂದ್ಯದಲ್ಲಿ ಅವರು ಅಜೇಯ ಅರ್ಧ ಶತಕ ಗಳಿಸಿದ್ದು ತಂಡಕ್ಕೆ ಕೊಂಚ ನೆಮ್ಮದಿ ಮೂಡಿಸಿದೆ.
ಕೆಲವು ಅನುಭವಿ ಬೌಲರ್‌ಗಳಿದ್ದರೂ ಡೆಲ್ಲಿ ತಂಡದ ಬೌಲಿಂಗ್ ಪರಿಣಾಮಕಾರಿ ಎನಿಸಿಲ್ಲ. ಅನ್‌ಕ್ಯಾಪ್ಡ್ ಆಟಗಾರ್ತಿ, ಚಂಡೀಗಢದ ನಂದನಿ ಶರ್ಮಾ ಅವರೇ ಐದು ಪಂದ್ಯಗಳಿಂದ 10 ವಿಕೆಟ್ ಪಡೆದು ಯಶಸ್ವಿ ಎನಿಸಿದ್ದಾರೆ. ಆದರೆ ಭಾರತದ ತಂಡದ ಆಟಗಾರ್ತಿಯರಾದ ಶ್ರೀಚರಣಿ (7 ವಿಕೆಟ್) ಮತ್ತು ಸ್ನೇಹ ರಾಣಾ (1 ವಿಕೆಟ್) ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ತಂಡದ ಅನುಭವಿ ಆಟಗಾರ್ತಿ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮರೈಝನ್ ಕಾಪ್ (4 ವಿಕೆಟ್) ಕೂಡ ಮಿಂಚುತ್ತಿಲ್ಲ. ಆದರೆ ಅವರ ಇಕಾನಮಿ (5.25) ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಪ್ರಬಲ ಬ್ಯಾಟರ್‌ಗಳಿರುವ ಆರ್‌ಸಿಬಿ ತಂಡವನ್ನು ತಡೆಯಲು ಡೆಲ್ಲಿ ಸಾಹಸ ಪಡಬೇಕಿದೆ.
ನಾಯಕಿ ಸ್ಮೃತಿ ಮಂದಾನ ಮತ್ತು ಗ್ರೇಸ್ ಹ್ಯಾರಿಸ್ ಅವರಿಬ್ಬರೂ ಉತ್ತಮವಾಗಿ ಆಡಿದ್ದಾರೆ. ನದೀನ್ ಡಿ ಕ್ಲರ್ಕ್ ಮತ್ತು ರಿಚಾ ಘೋಷ್ ಅವರು ಮಧ್ಯಮ ಮತ್ತು ಕೆಳಕ್ರಮಾಂಕದಲ್ಲಿ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಗೌತಮಿ ನಾಯಕ್ ಸಹ ಒಂದು ಅರ್ಧ ಶತಕ (73) ಹೊಡೆದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
ಮಾಜಿ ಚಾಂಪಿಯನ್ನರ ಬೌಲಿಂಗ್ ಸಹ ಪ್ರಬಲವಾಗಿದೆ ಸಯಾಲಿ ಸತ್ಘರೆ, ಡಿ ಕ್ಲರ್ಕ್, ಲಾರೆನ್ಸ್ ಬೆಲ್ ಮತ್ತು ಶ್ರೇಯಾಂಕ ಪಾಟೀಲ ಎದುರಾಳಿಗಳ ವೇಗಕ್ಕೆ ಲಗಾಮು ಹಾಕುತ್ತಿದ್ದಾರೆ. ಇಕಾನಮಿ ಸಹ ಉತ್ತಮವಾಗಿದೆ.
ಪಂದ್ಯ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.