
ಲಿಯೋನೆಲ್ ಮೆಸ್ಸಿ ಪ್ರತಿಮೆ
ಕೃಪೆ: ಪಿಟಿಐ
ಕೋಲ್ಕತ್ತ: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರು, 21 ಮೀಟರ್ (70 ಅಡಿ) ಎತ್ತರದ ತಮ್ಮದೇ ಪ್ರತಿಮೆಯನ್ನು ಇಂದು ಕೋಲ್ಕತ್ತದಲ್ಲಿ ಅನಾವರಣಗೊಳಿಸಿದ್ದಾರೆ. ಆದರೆ, ಆ ಪ್ರತಿಮೆ ಅವರನ್ನು ಹೋಲುತ್ತಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿರುವ ರೀತಿಯಲ್ಲಿ ಪ್ರತಿಮೆಯನ್ನು ರೂಪಿಸಲಾಗಿದೆ. ಭದ್ರತೆಯ ಕಾರಣದಿಂದಾಗಿ ಅವರು, ವರ್ಚುವಲ್ ಆಗಿ ಪ್ರತಿಮೆ ಅನಾವರಣ ಮಾಡಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಂದಿನಿಂದ 'GOAT Tour of India' ಪ್ರವಾಸ ಕೈಗೊಂಡಿರುವ ಮೆಸ್ಸಿ, ಮೂರು ದಿನ ಭಾರತದಲ್ಲಿ ಇರಲಿದ್ದಾರೆ. ಈ ವೇಳೆ ಕ್ರಮವಾಗಿ ಕೋಲ್ಕತ್ತ, ಹೈದರಾಬಾದ್, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಲಿದ್ದಾರೆ.
ಮೆಸ್ಸಿ, ಶುಕ್ರವಾರ ಮಧ್ಯರಾತ್ರಿ 2.26ಕ್ಕೆ ಕೋಲ್ಕತ್ತಗೆ ಬಂದಿಳಿದಿದ್ದಾರೆ. ಚಳಿಯನ್ನೂ ಲೆಕ್ಕಿಸದೆ ಕಾದುಕುಳಿತಿದ್ದ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ಬರಮಾಡಿಕೊಂಡಿದ್ದಾರೆ.
ಆದರೆ, ಭದ್ರತೆಯ ಕಾರಣದಿಂದ ಅವರು ಹೆಚ್ಚು ಹೊತ್ತು ವಿಮಾನ ನಿಲ್ದಾನದಲ್ಲಿ ಇರಲು ಸಾಧ್ಯವಾಗಿಲ್ಲ. ಇದರಿಂದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಬಿಗಿ ಭದ್ರತೆಯಲ್ಲಿ ಏರ್‌ಪೋರ್ಟ್‌ನಿಂದ ನಿರ್ಗಮಿಸಿದ ಮೆಸ್ಸಿ, ಹಿಂಬದಿ ಗೇಟ್ ಮೂಲಕ ನಸುಕಿನ 3.30ರ ಸುಮಾರಿಗೆ ಹೋಟೆಲ್ ತಲುಪಿದ್ದಾರೆ. ಹೋಟೆಲ್ ಎದುರು ಕಾದಿದ್ದವರಿಗೂ ಬೇಸರವಾಗಿದೆ.
ಮೆಸ್ಸಿಯವರಂತಿಲ್ಲ ಪ್ರತಿಮೆ!
ಕೋಲ್ಕತ್ತದಲ್ಲಿ ನಿರ್ಮಿಸಿರುವ ಪ್ರತಿಮೆಯು ಮೆಸ್ಸಿ ಅವರಂತೆ ಕಾಣುವುದಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಅವರು, ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲಿಕ್ ಅವರನ್ನು ಹೋಲುವ ಪ್ರತಿಮೆ ರೂಪಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.