ADVERTISEMENT

ವಿಶ್ವ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದ ಸಾತ್ವಿಕ್‌–ಚಿರಾಗ್

ಪಿಟಿಐ
Published 31 ಆಗಸ್ಟ್ 2025, 11:28 IST
Last Updated 31 ಆಗಸ್ಟ್ 2025, 11:28 IST
<div class="paragraphs"><p>ಚಿರಾಗ್‌ ಶೆಟ್ಟಿ&nbsp;ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ</p></div>

ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ

   

(ರಾಯಿಟರ್ಸ್ ಚಿತ್ರ)

ಪ್ಯಾರಿಸ್: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್‌‌ ಚಾಂಪಿಯನ್‌ಷಿಪ್‌ ಪುರುಷರ ಸಿಂಗಲ್ಸ್‌ ಕಂಚಿನ ಪದಕ ಪಡೆದರು. 

ADVERTISEMENT

ಶನಿವಾರ ಸಂಜೆ ನಡೆದ  ಸೆಮಿಫೈನಲ್‌ನಲ್ಲಿ ಭಾರತದ ಜೋಡಿಯು 19-21, 21-18, 12-21ರಿಂದ ಚೀನಾದ 11ನೇ ಶ್ರೇಯಾಂಕದ ಚೆನ್ ಬೊ ಯಾಂಗ್ ಮತ್ತು ಲೀ ಯಿ  ಅವರ ಎದುರು ಮಣಿಯಿತು. 67 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ನಿಕಟ ಪೈಪೋಟಿ ಕಂಡುಬಂದಿತು. ಇದರಲ್ಲಿ ಚೀನಾದ ಜೋಡಿಯು ಪ್ರಯಾಸದ ಜಯ ಸಾಧಿಸಿತು.

ಆದರೆ ಎರಡನೇ ಗೇಮ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ ಜೋಡಿಯು ತಿರುಗೇಟು ನೀಡಿತು. ಕೇವಲ ಮೂರು ಅಂಕಗಳ ಅಂತರದಿಂದ ಗೇಮ್‌ನಲ್ಲಿ ಭಾರತದ ಆಟಗಾರರು ರೋಚಕ ಜಯ ಸಾಧಿಸಿದರು. ಆದರೆ ಚೀನಾ ಆಟಗಾರರು ಮೂರನೇ ಮತ್ತು ನಿರ್ಣಾಯಕ ಗೇಮ್ಸ್‌ನಲ್ಲಿ ತೋರಿದ ಚಾಕಚಕ್ಯತೆ ಮತ್ತು ಪರಸ್ಪರ ಹೊಂದಾಣಿಕೆಯ ಆಟಕ್ಕೆ ಮೇಲುಗೈ ಲಭಿಸಿತು.  ಇದರಿಂದಾಗಿ ಭಾರತದ ಜೋಡಿಯು ಸೋಲಿಗೆ ಶರಣಾಗಬೇಕಾಯಿತು. 

ಚಿರಾಗ್ ಜೋಡಿಯು ಒಂದೊಮ್ಮೆ ಜಯಿಸಿದ್ದರೆ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ತಲುಪಿದ ಭಾರತದ ಮೊದಲ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಈ ಜೋಡಿಗೆ   ಚಾಂಪಿಯನ್‌ಷಿಪ್ ಇತಿಹಾಸದಲ್ಲಿ ಎರಡನೇ ಕಂಚಿನ ಪದಕ ಇದಾಗಿದೆ. 2022ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ವಿಶ್ವ ಟೂರ್ನಿಯಲ್ಲಿ ಸಾತ್ವಿಕ್ ಜೋಡಿಯು ಕಂಚು ಪಡೆದಿತ್ತು. 

ಶುಕ್ರವಾರ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಸಾತ್ವಿಕ್ –ಚಿರಾಗ್ ಅವರು ಮಲೇಷ್ಯಾದ ಎರಡು ಒಲಿಂಪಿಕ್ಸ್ ಪದಕ ವಿಜೇತ ಜೋಡಿ ಆ್ಯರನ್ ಚಿಯಾ ಮತ್ತು ಸೊಹ ವೂಯ್ ಯೀಕ್ ವಿರುದ್ಧ ಗೆದ್ದಿದ್ದರು. 

‘ಪಂದ್ಯದ ಆರಂಭದಿಂದಲೂ ನಮಗೆ ಉತ್ತಮ ಲಯ ಸಿಗಲಿಲ್ಲ. ಉತ್ತಮ ಆರಂಭವನ್ನೂ ಮಾಡಲಾಗಿಲ್ಲ. ಸುಲಭವಾಗಿ ರಕ್ಷಿಸಿಕೊಳ್ಳಬೇಕಿದ್ದ ಪಾಯಿಂಟ್‌ಗಳನ್ನೂ ಕೈಚೆಲ್ಲಿದ್ದು (ಮೂರನೇ ಗೇಮ್) ಲೋಪ. ಹೆಚ್ಚು ನಿಖರವಾಗಿ ಆಡಿದ್ದರೆ ಗೆಲುವಿನ ಅವಕಾಶ ಇತ್ತು. ಅವರು (ಎದುರಾಳಿ) ಶಿಸ್ತುಬದ್ಧ ಸರ್ವಿಸ್‌ಗಳನ್ನು ಮಾಡಿದರು’ ಎಂದು ಚಿರಾಗ್  ಅವರು ಪಂದ್ಯದ ನಂತರ ಹೇಳಿದರು. 

ಪ್ರಸಕ್ತ ಋತುವಿನಲ್ಲಿ ಇಬ್ಬರೂ ಆಟಗಾರರು ಬಹಳಷ್ಟು ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ. ಚಿರಾಗ್ ಅವರು ಬೆನ್ನುನೋವಿನಿಂದ ಕೆಲಕಾಲ ಆಟದಿಂದ ದೂರವಿದ್ದರು. ಫೆಬ್ರುವರಿಯಲ್ಲಿ ಸಾತ್ವಿಕ್ ಅವರ ತಂದೆ ನಿಧನರಾಗಿದ್ದರು. 

ಈಚೆಗೆ ನಡೆದ ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಮೂಲಕ ಅವರಿಬ್ಬರೂ ಮತ್ತೆ ಅಂಕಣಕ್ಕೆ ಮರಳಿದ್ದರು. ಈ ಟೂರ್ನಿ, ಸಿಂಗಪುರ ಓಪನ್ ಮತ್ತು ಚೀನಾ ಓಪನ್ ಟೂರ್ನಿಗಳಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.