ಕೋನೇರು ಹಂಪಿ
ಬಟುಮಿ (ಜಾರ್ಜಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಅವರಿಗೆ ಫಿಡೆ ವಿಶ್ವ ಮಹಿಳಾ ಚೆಸ್ ಕಪ್ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ನೀಡಲಾಗಿದೆ. ಭಾನುವಾರ ಆರಂಭವಾಗುವ ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರು ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯಲಿದ್ದಾರೆ.
ಹಂಪಿ ಅವರು ಇಲ್ಲಿ ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದಾರೆ.ಚೀನಾದ ಲೀ ಟಿಂಗ್ಜೀ, ಜಿನರ್ ಝೂ ಮತ್ತು ಝೊಂಗ್ವಿ ತಾನ್ ಅವರು ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಶ್ರೆಯಾಂಕ ಪಡೆದಿದ್ದಾರೆ. ಆ ಮೂಲಕ ಈ ಮಹಿಳಾ ವಿಭಾಗದಲ್ಲಿ ಏಷ್ಯಾದ ಪಾರಮ್ಯ ಮುಂದುವರಿದಿದೆ.
ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಎಂಟು ಮಂದಿಗೆ ಮಾತ್ರ ಆಡಲು ಅವಕಾಶ ಇದ್ದು ವಿಜೇತ ಆಟಗಾರ್ತಿ, ವಿಶ್ವ ಚಾಂಪಿಯನ್‌ಗೆ (ಪ್ರಸ್ತುತ ಚೀನಾ ವೆನ್ಜುನ್ ಜು) ಸವಾಲು ಹಾಕುವ ಅರ್ಹತೆ ಪಡೆಯಲಿದ್ದಾರೆ.
ಅಗ್ರ 21 ರೇಟೆಡ್ ಆಟಗಾರ್ತಿಯರಿಗೆ ನೇರವಾಗಿ ಎರಡನೇ ಸುತ್ತಿಗೆ ಬೈ ನೀಡಲಾಗಿದೆ. ಹಂಪಿ ಅವರ ಜೊತೆಗೆ ಭಾರತದ ಇನ್ನೂ ಕೆಲವು ಮಂದಿ ಈ ಟೂರ್ನಿಯಲ್ಲಿ ಭಾಗವಹಿಸುತ್ತಿ
ದ್ದಾರೆ. ಗ್ರ್ಯಾಂಡ್‌ಮಾಸ್ಟರ್‌ಗಳಾದ ದ್ರೋಣವಲ್ಲಿ ಹಾರಿಕ, ಆರ್.ವೈಶಾಲಿ, ಐಎಂ ದಿವ್ಯಾ ದೇಶಮುಖ್, ವಂತಿಕಾ ಅಗರವಾಲ್, ಪದ್ಮಿನಿ ರಾವುತ್, ಪಿ.ವಿ.ನಂದಿತಾ, ಮನಿಷಾ ಮೊಹಾಂತಿ ಮತ್ತು ಕೆ.ಪ್ರಿಯಾಂಕಾ ಅವರೂ ಭಾಗವಹಿಸಲಿದ್ದಾರೆ.
86 ಆಟಗಾರ್ತಿಯರು ಆಡುತ್ತಿರುವ ಈ ಟೂರ್ನಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಮೊದಲ ಸುತ್ತಿನಲ್ಲಿ ಗೆಲ್ಲುವ 43 ಆಟಗಾರ್ತಿಯರು, ಎರಡನೇ ಸುತ್ತಿಗೆ ಬೈ ಪಡೆದ 21 ಆಟಗಾರ್ತಿಯರನ್ನು ಕೂಡಿಕೊಳ್ಳಲಿದ್ದಾರೆ.
ಪ್ರತಿ ಸುತ್ತು ಎರಡು ಕ್ಲಾಸಿಕಲ್ ಆಟಗಳನ್ನು ಒಳಗೊಂಡಿದೆ. ಒಂದು ವೇಳೆ ಡ್ರಾ ಆದಲ್ಲಿ ಮರುದಿನ (ವಿಶ್ರಾಂತಿ ದಿನ) ವಿಜೇತರನ್ನು ನಿರ್ಧರಿಸಲು ಅಲ್ಪಾವಧಿಯ ಟೈಬ್ರೇಕ್ ಪಂದ್ಯ ಆಡಬೇಕಾಗುತ್ತದೆ.
ರೇಟಿಂಗ್ ಪ್ರಕಾರ ಲೀ ಟಿಂಗ್ಜೀ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಜಿನರ್ ಝು ಇತ್ತೀಚಿನ ವರ್ಷಗಳಲ್ಲಿ ಅಮೋಘವಾಗಿ ಆಡುತ್ತಿದ್ದಾರೆ. ಒಲಿಂಪಿಯಾಡ್‌ನಲ್ಲಿ ಭಾರತದ ತಂಡ, ಚೀನಾವನ್ನು ಸೋಲಿಸಿದ್ದರೂ, ರೇಟಿಂಗ್ ಆಧಾರದಲ್ಲಿ ಚೀನಾ ಆಟಗಾರ್ತಿಯರು ಮುಂದೆಯಿದ್ದು ಫೇವರಿಟ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.