ಬಟುಮಿ (ಜಾರ್ಜಿಯಾ): ಪ್ರತಿಭಾನ್ವಿತ ಐಎಂ ಆಟಗಾರ್ತಿ ದಿವ್ಯಾ ದೇಶಮುಖ್ ಅವರು ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ನ ಮೊದಲ ಕ್ಲಾಸಿಕಲ್ ಆಟದಲ್ಲಿ ದಿಗ್ಗಜ ಆಟಗಾರ್ತಿ ಕೋನೇರು ಹಂಪಿ ವಿರುದ್ಧ ಪಾಯಿಂಟ್ ಹಂಚಿಕೊಂಡರು. ಶನಿವಾರ ನಡೆದ ಈ ಆಟದಲ್ಲಿ ಇಬ್ಬರಿಗೂ ಮುನ್ನಡೆಯುವ ಅವಕಾಶಗಳಿದ್ದವು.
ಎರಡು ಬಾರಿಯ ರ್‍ಯಾಪಿಡ್ ವಿಶ್ವ ಚಾಂಪಿಯನ್ ಆಗಿರುವ ಗ್ರ್ಯಾಂಡ್‌ಮಾಸ್ಟರ್ ಹಂಪಿ ಭಾನುವಾರ ನಡೆಯುವ ಎರಡನೇ ಆಟದಲ್ಲಿ ಬಿಳಿ ಕಾಯಿಗಳಲ್ಲಿ ಆಡಲಿದ್ದಾರೆ. ಈ ಆಟವೂ ಡ್ರಾ ಆದಲ್ಲಿ ಸೋಮವಾರ ಅಲ್ಪಾವಧಿಯ ಟೈಬ್ರೇಕ್ ಆಟಗಳ ಮೂಲಕ ಪಂದ್ಯದ ವಿಜೇತರನ್ನು ನಿರ್ಧರಿಸಲಾಗುವುದು.
19 ವರ್ಷ ವಯಸ್ಸಿನ ದಿವ್ಯಾ ತಮ್ಮ ಪ್ರಮುಖ ಪಡೆಯನ್ನು ಬಲಿಗೊಟ್ಟು ಅನುಭವಿ ಎದುರಾಳಿಗೆ ರಾಜನನ್ನು ಕ್ಯಾಸಲ್ ಮಾಡುವ ಅವಕಾಶ ನಿರಾಕರಿಸಿದರು. ಕಂಪ್ಯೂಟರ್ ಪ್ರಕಾರ 14ನೇ ನಡೆಯವರೆಗೆ ದಿವ್ಯಾ ಅವರಿಗೆ ಮೇಲುಗೈಯಿತ್ತು. ಆದರೆ ಕಳೆದುಕೊಂಡ ಪಡೆಯಿಂದಾದ ನಷ್ಟ ಸರಿದೂಗಿಸಲು ಅವರು ಪರದಾಡಬೇಕಾಯಿತು. ಈ ಹಂತದಲ್ಲಿ ಇಬ್ಬರೂ ಕೆಲವು ಪಡೆಗಳನ್ನು ಕಳೆದುಕೊಂಡರು.
41 ನಡೆಗಳ ನಂತರ ‘ನಡೆಗಳ ಪುನರಾವರ್ತನೆ’ (ತ್ರೀ ಫೋಲ್ಡ್ ರಿಪಿಟೇಷನ್) ಆಧಾರದಲ್ಲಿ ಆಟ ಡ್ರಾ ಆಯಿತು.
‘ಇಬ್ಬರೂ ಆಕ್ರಮಣಕ್ಕೆ ಸಿದ್ಧತೆ ನಡೆಸುವ ಹಂತದಲ್ಲಿ ತಪ್ಪುಗಳನ್ನು ಮಾಡಿದರು. ಹಂಪಿ 10ನೇ ನಡೆಯಲ್ಲಿ ಮತ್ತು ದಿವ್ಯಾ 14ನೇ ನಡೆಯಲ್ಲಿ ಮಾಡಿದ ತಪ್ಪುಗಳಿಂದ ಮೇಲುಗೈ ಕಳೆದುಕೊಂಡು ಪಂದ್ಯ ಸಮಬಲಕ್ಕೆ ಬಂದಿತು’ ಎಂದು ಗ್ರ್ಯಾಂಡ್‌ಮಾಸ್ಟರ್ ಪ್ರವೀಣ್ ತಿಪ್ಸೆ ಅಭಿಪ್ರಾಯಪಟ್ಟರು.
ಡ್ರಾ ಪಂದ್ಯದಲ್ಲಿ ತಾನ್–ಲೀ ಮೂರನೇ ಸ್ಥಾನಕ್ಕಾಗಿ ಚೀನಾದ ಇಬ್ಬರು ಆಟಗಾರ್ತಿಯರ ನಡುವೆ ನಡೆಯುತ್ತಿರುವ ಸೆಣಸಾಟದ ಮೊದಲ ಆಟವನ್ನು ಮಾಜಿ ವಿಶ್ವ ಚಾಂಪಿಯನ್ ಝೊಂಗ್‌ಯಿ ತಾನ್ ಅವರು ಅಗ್ರ ಶ್ರೇಯಾಂಕದ ಲೀ ಟಿಂಗ್ಜೀ ಜೊತೆ ಡ್ರಾ ಮಾಡಿಕೊಂಡರು. 34ನೇ ನಡೆಯಲ್ಲಿ ಆಟ ಡ್ರಾ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.