ADVERTISEMENT

FIFA ಶಾಂತಿ ಪ್ರಶಸ್ತಿ: 2026ರ ವಿಶ್ವಕಪ್‌ನಲ್ಲಿ ಪ್ರದಾನ; ಟ್ರಂಪ್‌ಗೆ ಸಿಗಲಿದೆಯೇ?

ಏಜೆನ್ಸೀಸ್
Published 6 ನವೆಂಬರ್ 2025, 10:28 IST
Last Updated 6 ನವೆಂಬರ್ 2025, 10:28 IST
<div class="paragraphs"><p>ಗಿಯಾನಿ, ಡೊಲಾನ್ಡ್‌ ಟ್ರಂಪ್</p></div>

ಗಿಯಾನಿ, ಡೊಲಾನ್ಡ್‌ ಟ್ರಂಪ್

   

ನ್ಯೂಯಾರ್ಕ್‌: ಫುಟ್‌ಬಾಲ್‌ ಒಕ್ಕೂಟವಾದ ಫಿಫಾ ವತಿಯಿಂದ ಶಾಂತಿ ಪ್ರಶಸ್ತಿ ನೀಡುವ ಘೋಷಣೆ ಹೊರಬಿದ್ದಿದ್ದು, 2026ರ ವಿಶ್ವಕಪ್‌ ಸಂದರ್ಭದಲ್ಲಿ ಇದನ್ನು ಪ್ರದಾನ ಮಾಡಲಾಗುತ್ತದೆ ಎಂದು ವಿಶ್ವ ಫುಟ್‌ಬಾಲ್‌ ಒಕ್ಕೂಟದ ಆಡಳಿತ ಮಂಡಳಿ ಹೇಳಿದೆ.

ಫಿಫಾ ಶಾಂತಿ ಪ್ರಶಸ್ತಿಯ ಡ್ರಾ ಪ್ರಕ್ರಿಯೆಯು ಡಿಸೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯಲಿದೆ. ‘ಫಿಫಾ ಶಾಂತಿ ಪ್ರಶಸ್ತಿ– ಜಗತ್ತನ್ನು ಬೆಸೆಯುವ ಫುಟ್‌ಬಾಲ್‌’ ಎಂಬ ಒಕ್ಕಣೆಯನ್ನು ಫಿಫಾ ಹೊಂದಿದೆ. ಈ ಪ್ರಶಸ್ತಿಯನ್ನು ಜಗತ್ತಿನಲ್ಲಿ ಶಾಂತಿ ನೆಲೆಸಲು ಅತ್ಯದ್ಭುತ ಶ್ರಮ ವಹಿಸಿದ ವಿಶೇಷ ವ್ಯಕ್ತಿಗೆ ನೀಡಲಾಗುವುದು’ ಎಂದಿದೆ.

ADVERTISEMENT

‘ಅಶಾಂತಿಯಿಂದ ಕೂಡಿರುವ ಹಾಗೂ ಎರಡು ಗುಂಪುಗಳಾಗಿ ವಿಭಜನೆಯಾಗಿರುವ ಜಗತ್ತಿನಲ್ಲಿ ಸಂಘರ್ಷವನ್ನು ಕೊನೆಗಾಣಿಸಿ ಜನರನ್ನು ಒಂದುಗೂಡಿಸಿದ ಮತ್ತು ಶಾಂತಿಯ ಮಂತ್ರವನ್ನು ಜಪಿಸಿದವರ ಆಯ್ಕೆಯೇ ಮುಖ್ಯವಾಗಿದೆ’ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಹೇಳಿದ್ದಾರೆ.

'ಫುಟ್‌ಬಾಲ್‌ ಎಂದರೆ ಶಾಂತಿ ಎಂದರ್ಥ. ಫುಟ್‌ಬಾಲ್ ಆಟವು ಇಡೀ ಜನರನ್ನು ಒಗ್ಗೂಡಿಸುತ್ತದೆ. ಮುಂದಿನ ತಲೆಮಾರಿನವರಿಗೆ ಭವಿಷ್ಯದ ಕುರಿತು ಭರವಸೆ ಮೂಡಿಸುವ ಆಟವೇ ಫುಟ್‌ಬಾಲ್‌’ ಎಂದಿದ್ದಾರೆ.

ಡಿ. 5ರಂದು ವಾಷಿಂಗ್ಟನ್‌ಲ್ಲಿರುವ ಜಾನ್‌ ಎಫ್‌. ಕೆನ್ನಡಿ ಕೇಂದ್ರದಲ್ಲಿ ಡ್ರಾ ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ 48 ತಂಡಗಳು ಯಾವ ಗುಂಪಿನಲ್ಲಿವೆ ಮತ್ತು ಯಾರನ್ನು ಎದುರಿಸಲಿದ್ದಾರೆ ಎಂಬುದು ಗೊತ್ತಾಗಲಿದೆ. ಈ ಮಾಹಿತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್‌ನಲ್ಲಿ ಹಂಚಿಕೊಂಡಿದ್ದರು.

'ಅಧ್ಯಕ್ಷರೇ... ನಾವು ಜಗತ್ತನ್ನು ಒಗ್ಗೂಡಿಸುತ್ತಿದ್ದೇವೆ. ಅಮೆರಿಕದಲ್ಲಿ ನಿಂತು ನಮಗೆ ಅತೀವ ಹೆಮ್ಮೆಯಾಗುತ್ತಿದೆ’ ಎಂದು ಟ್ರಂಪ್‌ ಟ್ರೋಫಿ ಎತ್ತುವ ಮೊದಲು ಇನ್‌ಫಾಂಟಿನೊ ಹೇಳಿದ್ದರು.

ನೊಬೆಲ್ ಶಾಂತಿ ಪ್ರಶಸ್ತಿಗೂ ಡೊನಾಲ್ಡ್ ಟ್ರಂಪ್‌ ಹೆಸರು ಮುನ್ನೆಲೆಗೆ ಬಂದಿತ್ತು. ಭಾರತ ಮತ್ತು ಪಾಕಿಸ್ತಾನ ನುಡುವಿನ ಯುದ್ಧ ಸಹಿತ ಹಲವು ಸಂಘರ್ಷಗಳನ್ನು ನಿಲ್ಲಿಸಿದ್ದಾಗಿ ಟ್ರಂಪ್ ಅವರು ಹಲವು ಬಾರಿ ಬಹಳಷ್ಟು ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಟ್ರಂಪ್ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿಯೂ ಜಪಾನ್‌, ಪಾಕಿಸ್ತಾನ ಸಹಿತ ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರು ಹೇಳಿದ್ದಾರೆ. ಆದರೆ 2025ರ ಪ್ರಶಸ್ತಿಯು ವೆನೆಜುವೆಲಾದ ವಿರೋಧ ಪಕ್ಷವಾದ ‘ವೆಂಟೆ ವೆನೆಜುವೆಲಾ’ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಘೋಷಣೆಯಾದಾಗ ಅದರಲ್ಲಿ ಟ್ರಂಪ್ ಹೆಸರು ಇಲ್ಲದಿರುವುದಕ್ಕೆ ನೊಬೆಲ್ ಸಮಿತಿಯನ್ನು ಶ್ವೇತಭವನ ಟೀಕಿಸಿತ್ತು.  

ಅಮೆರಿಕ, ಕೆನಡಾ, ಮೆಕ್ಸಿಕೊ ಒಳಗೊಂಡು ಮುಂದಿನ ವಿಶ್ವಕಪ್ ನಡೆಯುತ್ತಿದೆ. ಜೂನ್ 11ಕ್ಕೆ ಆರಂಭಗೊಂಡು ಜುಲೈ 19ರವರೆಗೂ 16 ಕ್ರೀಡಾಂಗಣಗಳಲ್ಲಿ 104 ಪಂದ್ಯಗಳು ನಡೆಯಲಿವೆ. ಇದರಲ್ಲಿ ಟ್ರಂಪ್ ಅವರಿಗೆ ಫಿಫಾ ಚೊಚ್ಚಲ ಶಾಂತಿ ಪ್ರಶಸ್ತಿ ದೊರೆಯಲಿದೆಯೇ ಎಂಬ ಚರ್ಚೆ ಅಂತರ್ಜಾಲದಲ್ಲಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.